ಶಿಕ್ಷಕರಿಗೆ ಮಧ್ಯಂತರ ರಜೆ ಕ್ಯಾನ್ಸಲ್ : ವಿದ್ಯಾಗಮ ಮುಂದುವರಿಕೆ- ಆದೇಶ ಅವೈಜ್ಞಾನಿಕ- ಗ್ರಾಮೀಣ ಸಂಘ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ನಿಗದಿಪಡಿಸಿದ ಮಧ್ಯಂತರ ರಜೆಯನ್ನ ರದ್ದುಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದು, ವಿದ್ಯಾಗಮ ಯೋಜನೆಯನ್ನ ಮುಂದುವರೆಸಿಕೊಂಡು ಹೋಗಬೇಕೆಂದು ಸೂಚನೆ ನೀಡಲಾಗಿದೆ.
ಈ ಬಗ್ಗೆ ಇಂದು ಆದೇಶ ಹೊರಡಿಸಲಾಗಿದ್ದು, 2020-21ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನ ಇದೇ ಕಚೇರಿಯಿಂದ 14.02.2020ರಂದು ಹೊರಡಿಸಲಾಗಿತ್ತು.
ಈ ಸುತ್ತೋಲೆಯನ್ನ ರದ್ದುಪಡಿಸಲಾಗಿದೆ. ಜೊತೆಗೆ ಮಧ್ಯಂತರ ರಜೆಯನ್ನೂ ಸಹ ರದ್ದು ಮಾಡಲಾಗಿದೆ. ಹೀಗಾಗಿ ಇಲಾಖೆ ಸೂಚಿಸಿದ ಆದೇಶಗಳನ್ನ ಪಾಲಿಸುವಂತೆ ಶಿಕ್ಷಕ ಸಮೂಹಕ್ಕೆ ಆದೇಶ ನೀಡಲಾಗಿದೆ.
ವಿದ್ಯಾಗಮ ಯೋಜನೆಯನ್ನ ಕಲಿಕಾ ಕಾರ್ಯಕ್ರಮವನ್ನ ಯಥಾವತ್ತಾಗಿ ಮುಂದಿನ ಆದೇಶದವರೆಗೆ ಮುಂದುವರೆಸಿಕೊಂಡು ಹೋಗುವಂತೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಅವೈಜ್ಞಾನಿಕ ಆದೇಶ
ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಮ್ ಸಜ್ಜನ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಸರಕಾರದ ಈ ಆದೇಶವನ್ನ ಅವೈಜ್ಞಾನಿಕವೆಂದಿದ್ದಾರೆ. ಸುಸ್ತಾಗಿರುವ ಶಿಕ್ಷಕರಿಗೆ ರಜೆ ಬೇಕೇ ಬೇಕು. ಈ ದಿಸೆಯಲ್ಲಿ ಘನ ಸರ್ಕಾರದ ಹಾಗೂ ಅಧಿಕಾರಿಗಳ ಮನವೊಲಿಸುವ ಪ್ರಯತ್ನ ಕೈ ಬಿಟ್ಟಿಲ್ಲ ಎಂದಿದ್ದಾರೆ.