ಸರಕಾರಿ ಶಾಲಾ ಶಿಕ್ಷಕನ ಗಾಂಧಿಗಿರಿ: ನೀವ್ಯಾರೂ ಇದನ್ನ ಮಾಡಿರೋಕೆ ಸಾಧ್ಯವೆಯಿಲ್ಲ.. ಬಿಡಿ..!

ಉತ್ತರಕನ್ನಡ: ತನ್ನ ವಿದ್ಯಾರ್ಥಿಗಳಲ್ಲೇ ದೇವರನ್ನ ಕಾಣುತ್ತ ಮುನ್ನಡೆದಿರುವ ಶಿಕ್ಷಕರೋರ್ವರ ಬಗ್ಗೆ ತಮಗೆ ತಿಳಿಸುವ ಮಾಹಿತಿಯನ್ನೂ ನೀವೂ ಸಂಪೂರ್ಣವಾಗಿ ಓದಿ. ಯಾಕಂದ್ರೇ, ಓರ್ವ ಶಾಲಾ ಶಿಕ್ಷಕ, ತನ್ನ ಬದುಕಿನಲ್ಲಿ ಹೇಗೆಲ್ಲ ಜೀವನ ಕಳೆದುಬಿಡ್ತಾನೆ ಎಂಬುದು ನಿಮಗೂ ಗೊತ್ತಾಗಲಿ..
ಮಕ್ಕಳಲ್ಲಿ ಪೌಷ್ಟಿಕಾಂಶ, ಆರೋಗ್ಯ ವೃದ್ಧಿಗಾಗಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವುದು ನಿಮಗೆ ಗೊತ್ತೆಯಿದೆ. ಅಷ್ಟೇ ಅಲ್ಲ, ಲಾಕ್ ಡೌನ್ ಆರಂಭವಾದಾಗಿನಿಂದ ಬಿಸಿಯೂಟ ಸಿಗುತ್ತಿಲ್ಲ ಎಂಬುದು ಸರಕಾರಿ ಶಾಲೆಗೆ ಮಕ್ಕಳನ್ನ ಕಳಿಸುವ ಪ್ರತಿಯೊಬ್ಬರಿಗೂ ಗೊತ್ತಿರತ್ತೆ. ಆದ್ರೇ, ಇಲ್ಲೋಬ್ಬ ಸರಕಾರಿ ಶಿಕ್ಷಕ ಮನೆ ಮನೆಗೆ ಹೋಗಿ ಪೌಷ್ಠಿಕಾಂಶದ ಕೊರತೆಯನ್ನ ನೀಗಿಸುತ್ತಿದ್ದಾರೆ. ಅದು ಹೇಗೆ ಗೊತ್ತಾ..
ತಾವೇ ದಿನವೂ ಬೈಕ್ ನಲ್ಲಿ ವಿದ್ಯಾರ್ಥಿಗಳ ಮನೆ ಮನೆಗೆ ಹೋಗಿ ಬಾಳೆಹಣ್ಣುಗಳನ್ನ ಕೊಟ್ಟು ಬರುತ್ತಾರೆ. ಅಂತಹ ಮಹಾನ್ ವ್ಯಕ್ತಿಯೇ ಹೆಸರೇ ರಾಮಚಂದ್ರ ನಾಯ್ಕ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿಗಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಚಂದ್ರ ನಾಯ್ಕ ಇಂತಹದೊಂದು ಮಾದರಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ವರ್ಷ ಶಾಲೆಯಲ್ಲಿ ಪಾಠ ಮಾಡುವಾಗ ಮಕ್ಕಳು ಹೊಟ್ಟೆ ಹಿಡಿದುಕೊಂಡು ಸಪ್ಪೆ ಮುಖ ಮಾಡುವುದನ್ನು ಗಮನಿಸಿದ್ದರು. ಈ ಬಗ್ಗೆ ಮಕ್ಕಳನ್ನ ವಿಚಾರಿಸಿದಾಗ ಬಹುತೇಕರು ಸರಿಯಾಗಿ ತಿಂಡಿ ಮಾಡಿಕೊಂಡು ಬರದೆ ಇರುವುದು ಗಮನಕ್ಕೆ ಬಂದಿದೆ. ಬಳಿಕ ಪಾಲಕರನ್ನು ಕರೆದು ತಿಳಿಸಿದರಾದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಶಾಲೆಯ ಎಸ್ ಡಿ ಎಂ ಸಿ ಹಾಗೂ ಅಡುಗೆಯವರ ಸಹಕಾರದೊಂದಿಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ನಿತ್ಯವೂ ಉಪಹಾರದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.
ಬೆಳಿಗ್ಗೆ ಶಾಲೆ ಪ್ರಾರಂಭವಾಗುವ ಮೊದಲೆ ಸರ್ಕಾರ ನೀಡುವ ಹಾಲಿನ ಜೊತೆಗೆ ಉಪ್ಪಿಟ್ಟು, ಅವಲಕ್ಕಿ, ಪುಳಿಯೊಗರೆ ಸೇರಿದಂತೆ ದಿನವೊಂದು ರೀತಿಯ ಉಪಹಾರ ನೀಡುತ್ತಿದ್ದಾರೆ. ತಮ್ಮ ಶಾಲೆಯ ಮಕ್ಕಳು ಮಾತ್ರವಲ್ಲದೆ ಪಕ್ಕದ ಅಂಗನವಾಡಿಯ ಮಕ್ಕಳು ಸೇರಿ ನಿತ್ಯ ೪೫ ಕ್ಕೂ ಹೆಚ್ಚು ಮಕ್ಕಳು ಉಪಹಾರ ಸೇವಿಸುತ್ತಿದ್ದರು.
ಆದ್ರೆ ಲಾಕ್ ಡೌನ್ ಘೋಷಣೆಯಾದ ಬಳಿಕ ಶಾಲೆಗಳು ಬಂದಾಗಿತ್ತು. ಮಕ್ಕಳಲ್ಲಿ ಅಪೌಷ್ಠಿಕತೆ ಕಾಡಬಾರದು ಎನ್ನುವ ಕಾರಣಕ್ಕೆ ಉಪಹಾರದ ಬದಲಿಗೆ ದಿನಕ್ಕೊಂದು ಬಾಳೆಹಣ್ಣಿನಂತೆ ಪ್ರತಿ ಗುರುವಾರದಂದು ಮಕ್ಕಳ ಮನೆ ಮನೆಗೆ ತೆರಳಿ ನೀಡುತ್ತಿದ್ದಾರೆ.
ವಿದ್ಯಾಗಮ ಆರಂಭಕ್ಕೂ ತಿಂಗಳ ಮುಂಚೆಯೇ ಕೊವಿಡ್ ಸುರಕ್ಷಾ ಕ್ರಮದೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿದ್ದ ಇಂತಹ ಗಾಂಧಿಗಿರಿಯನ್ನ ನಾವೂ ನೀವೂ ಮೆಚ್ಚಲೇಬೇಕು. ಇಂತಹ ಶಿಕ್ಷಕರಿಗೆ ನಿಮ್ಮದೂ ಒಂದೂ ಅಭಿನಂದನೆ ಸಲ್ಲಿಕೆಯಾಗಲಿ.