NWRTC ನಿವೃತ್ತ ಸಾರಿಗೆ ಸಿಬ್ಬಂದಿಗೆ ಸನ್ಮಾನ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಲ್ಲಿ ಸೇವಾ ನಿವೃತ್ತಿ ಹೊಂದಿದ ಸಾರಿಗೆ ಸಿಬ್ಬಂದಿಗಳಿಗೆ ಸಂಸ್ಥೆಯ ಕಲಾ ಮತ್ತು ಸಾಂಸ್ಕøತಿಕ ಭವನದಲ್ಲಿ ಹಿರಿಯ ಅಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಸಾರಿಗೆ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ನಿತ್ಯವೂ ಬಿನ್ನ ವಿಭಿನ್ನ ಸನ್ನಿವೇಶಗಳಲ್ಲಿ ವಿವಿಧ ಸ್ತರದ ಹಲವಾರು ಜನರ ಮಧ್ಯ ಕೆಲಸ ಮಾಡಬೇಕಾಗುತ್ತದೆ. ಬಸ್ಸಿನ ಜೊತೆಗೆ ಪ್ರತಿಕ್ಷಣವೂ ಸಂಚರಿಸುತ್ತಾ ಒಂದು ಊರಿಂದ ಮತ್ತೊಂದು ಊರಿಗೆ ಹೋಗಬೇಕು.ಆಯಾ ಪ್ರದೇಶಗಳ ಹವಾಮಾನ ಮತ್ತು ಆಹಾರಪದ್ಧತಿಗೆ ಒಗ್ಗಿಕೊಳ್ಳಬೇಕಾಗುತ್ತದೆ.ಹಬ್ಬ ಹರಿದಿನಗಳಲ್ಲಿ ಕುಟುಂದವರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಇಂತಹಹಲವಾರು ವೈರುಧ್ಯಗಳ ನಡುವೆಯೂ ಸಹಸುಮಾರು 35 ರಿಂದ 39 ವರ್ಷಗಳ ಕಾಲ ಅವಿರತವಾಗಿ ಸೇವೆ ಸಲ್ಲಿಸಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಸಹಾ ರಜೆ ಪಡೆಯದೆ ನಿರಂತರ ಕರ್ತವ್ಯ ನಿರ್ವಹಿಸುವ ಮೂಲಕ ನಿವೃತ್ತರು ಕಿರಿಯರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ನಿವೃತ್ತರಾದ 4 ಚಾಲಕರು, 3 ನಿರ್ವಾಹಕರು, 6 ಸಾರಿಗೆ ನಿಯಂತ್ರಕರು ಮತ್ತು 5 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 18 ಸಾರಿಗೆ ಸಿಬ್ಬಂದಿಗಳ ಸೆವೆಯನ್ನು ಸ್ಮರಿಸಿ ನೆನಪಿನ ಕಾಣಿಕೆ ನೀಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತು. ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ಕಾರ್ಮಿಕ ಕಲ್ಯಾಣ ಅಧಿಕಾರಿ ನಾಗಮಣಿ, ಲೆಕ್ಕಾಧಿಕಾರಿ ಸುನಿಲ ವಾಡೇಕರ ಇನ್ನಿತರರು ಮತ್ತು ನಿವೃತ್ತರ ಕುಟುಂಬದವರು ಇದ್ದರು.