ದಸರಾ ರಜೆ ರದ್ದು- ಸಿಎಸ್ಆರ್ ನಿಯಮಾವಳಿ ತದ್ವಿರುದ್ಧ: ಪುನರ್ ಪರಿಶೀಲನೆ ಮಾಡಿ- ಗ್ರಾಮೀಣ ಸಂಘದ ಮನವಿ
ಧಾರವಾಡ: ಶೈಕ್ಷಣಿಕ ವರ್ಷದಲ್ಲಿ ದಸರಾ ರಜೆಯನ್ನ ಕೊಡುತ್ತಿದ್ದ ಶಿಕ್ಷಣ ಇಲಾಖೆ, ಈ ಬಾರಿ ದಸರಾ ರಜೆಯನ್ನೂ ಕ್ಯಾನ್ಸಲ್ ಮಾಡಿ ಆದೇಶ ಹೊರಡಿಸಿದ್ದು, ಇದು ಕಾನೂನಿನ ಪ್ರಕಾರ ಸಮಂಜಸವಲ್ಲ. ಈ ಆದೇಶವನ್ನ ಮತ್ತೋಮ್ಮೆ ಪರಿಶೀಲನೆ ಮಾಡಿ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಒತ್ತಾಯಿಸಿದೆ.
ಈ ಬಗ್ಗೆ ಸಚಿವರಿಗೆ ಬರೆದಿರುವ ಪತ್ರದಲ್ಲಿದೆ.. ಇಲ್ಲಿದೆ ನೋಡಿ ಪ್ರತಿ
ಗೆ,
ಸನ್ಮಾನ್ಯ ಶ್ರೀ ಸುರೇಶಕುಮಾರ
ಶಿಕ್ಷಣ ಸಚಿವರು,
ಕರ್ನಾಟಕ ಸರ್ಕಾರ, ಬೆಂಗಳೂರು 01.
ಮಾನ್ಯರೆ,
ವಿಷಯ:- ರಾಜ್ಯದ ಶಾಲಾ ಕಾಲೇಜುಗಳ ದಸರಾ ರಜೆ ರದ್ದುಗೊಳಿಸಿರುವ ಆದೇಶ ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಮನವಿ ಪತ್ರ..
ಮಾನ್ಯರೆ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿ ವತಿಯಿಂದ ತಮ್ಮಲ್ಲಿ ವಿನಂತಿಸುವುದೇನೆಂದರೆ..
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಬೆಂಗಳೂರು ಇವರು ದಿನಾಂಕ 01-10-2020 ರಂದು ಒಂದು ಆದೇಶವನ್ನು ಮಾಡಿ 2020-21 ನೇ ಸಾಲಿನ ದಸರಾ ರಜೆ ರದ್ದುಗೊಳಿಸಿ ವಿದ್ಯಾಗಮ ಕಾರ್ಯಕ್ರಮ ಮುಂದುವರೆಸುವಂತೆ ಆದೇಶಿಸಿದ್ದಾರೆ. ಆದರೆ, ಈ ಆದೇಶವು ಕೆ ಸಿ ಎಸ್ ಆರ್ ನಿಯಮಾವಳಿಗಳಿಗೆ ತದ್ವಿರುದ್ದವಾಗಿದೆ. ಶಿಕ್ಷಕರು ರಜೆ ಸಹಿತ ನೌಕರರ ವೃಂದದಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರು. ರಾಜ್ಯದಲ್ಲಿ ಕೋವಿದ 19 ಸಾಂಕ್ರಾಮಿಕ ರೋಗದ ವ್ಯಾಪಕ ಹರುಡುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆ ನೀಡಿದ್ದರು. ಸರ್ಕಾರದ ಆದೇಶದ ಪ್ರಕಾರ ಎಲ್ಲ ಶಿಕ್ಷಕರು ಜೂನ 5 ರಿಂದ ನಿರಂತರ ಶಾಲೆಗಳಿಗೆ ಹಾಜರಾಗಿ ಮಕ್ಕಳ ಮನೆಗೆ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳ ನಿರಂತರತೆ ಕಾಪಾಡುವ ನಿಟ್ಟಿನಲ್ಲಿ ವಿದ್ಯಾಗಮ ಕಾರ್ಯಕ್ರಮದ ಅನುಷ್ಠಾನ ಮಾಡುತ್ತಾ ಬಂದಿದ್ದಾರೆ. ಇದಕ್ಕೂ ಮೊದಲು ಕೋವಿಡ್ ವಾರಿಯರ್ಸ್ ಆಗಿ ಬೇಸಿಗೆ ರಜೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ.
ಈಗ ದಸರಾ ರಜೆಯಲ್ಲಿಯೂ ಇದನ್ನೆ ಮುಂದುವರೆಸಿದರೆ ಕಾನೂನಿನ ಪ್ರಕಾರ ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತೊಂದರೆಯಾಗುತ್ತದೆ. ನಾಡ ಹಬ್ಬದ ಔಚಿತ್ಯ ಹಾಗೂ ಪ್ರಾಮುಖ್ಯತೆ ಮಕ್ಕಳು ಅರಿಯಲಿ ಎಂಬ ಮೂಲ ಉದ್ದೇಶದ ಮೇರೆಗೆ ನೀಡಲಾಗುತ್ತಿದ್ದ ದಸರಾ ರಜೆ ರದ್ದುಗೊಳಿಸಿ ಆದೇಶ ಮಾಡಿರುವುದು ಅತ್ಯಂತ ಖಂಡನಾರ್ಹ ಬೆಳವಣಿಗೆ ಆಗಿದೆ.
ಆದ್ದರಿಂದ ಮಾನ್ಯರವರು ಈ ಆದೇಶವನ್ಪು ಪುನರ್ ಪರಿಶೀಲಿಸುವಂತೆ ಹಾಗೂ ಈ ಹಿಂದಿನಂತೆಯೇ ದಸರಾ ರಜೆ ಮಂಜೂರು ಮಾಡುವ ಬಗ್ಗೆ ಸರ್ಕಾರದ ಗಮನ ಸೆಳೆಯಲು ವಿನಂತಿಸುತ್ತೇವೆ
ಗೌರವಾನ್ವಿತ ವಂದನೆಗಳೊಂದಿಗೆ
ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿ


