ಪ್ರತಿಭಾವಂತ “ಸಿಆರ್ ಪಿ” ಕೊರೋನಾದಿಂದ ಸಾವು: ದಂಗಾದ ಶಿಕ್ಷಕ ಸಮೂಹ

ಮೈಸೂರು: ಕೆಲವೇ ದಿನಗಳ ಹಿಂದೆ ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಣೆ ಮಾಡಿ ಮತ್ತೆ ಸಿಆರ್ ಪಿಯಾಗಿ ಕಾರ್ಯನಿರ್ವಹಣೆ ಮುಂದುವರೆಸಿದ್ದ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಕೊರೋನಾ ಪಾಸಿಟಿವ್ ನಿಂದ ತೀರಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ದಕ್ಷಿಣ ವಿಭಾಗದ ಹೆಬ್ಬಾಳು ಗ್ರಾಮದ ವಲಯ ಸಂಪನ್ಮೂಲ ಕೇಂದ್ರದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿದ್ದ ಪಿ.ಮಹದೇವ ಕೊರೋನಾಗೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಸಿಆರ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಮಹದೇವ, ಕೊರೋನಾ ವಾರಿಯರ್ ಆಗಿಯೂ ಕೆಲಸ ಮಾಡಿದ್ದರು. ಅದಾದ ನಂತರ ಇತ್ತೀಚೆಗೆ ಇವರಿಗೆ ಕೊರೋನಾ ಪಾಸಿಟಿವ್ ದೃಢವಾಗಿತ್ತು. ಈ ಮೊದಲು ಇವರ ಪತ್ನಿಗೆ ಕೊರೋನಾ ಬಂದಿದ್ದರೂ, ಅವರು ಆರೋಗ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ, ಪಿ.ಮಹದೇವ ಇದರಿಂದ ಹೊರಬರಲಾಗಿಲ್ಲ.
ಎರಡು ಗಂಡು ಮಕ್ಕಳನ್ನ ಹೊಂದಿರುವ ಪಿ.ಮಹದೇವರ ಸಾವು, ಶಿಕ್ಷಣ ಇಲಾಖೆಯ ವಲಯದಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಸರಕಾರ ಇದಕ್ಕೊಂದು ತೀರ್ಮಾನ ತೆಗೆದುಕೊಳ್ಳದೇ ಇದ್ದರೇ, ಶಿಕ್ಷಣ ಇಲಾಖೆಯಲ್ಲಿ ಆತಂಕ ಮುಂದುವರೆಯಲಿದೆ.