ವಿದ್ಯಾಗಮ ಶಿಕ್ಷಕರಿಗೆ ಕೊರೋನಾ- 72 ವಿದ್ಯಾರ್ಥಿಗಳು- 4ಶಿಕ್ಷಕರ ಗಂಟಲು ದ್ರವ ಟೆಸ್ಟ್
1 min readಹೊಸದುರ್ಗ: ರಾಜ್ಯ ಸರಕಾರ ಆರಂಭಿಸಿರುವ ವಿದ್ಯಾಗಮ ಯೋಜನೆಯಲ್ಲಿ ಮಕ್ಕಳಿಗೆ ಶಿಕ್ಷಕರೊಬ್ಬರು ಪಾಠ ಮಾಡಿದ್ದು, ಇದೀಗ ಅದೇ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮನೆ ಮಾಡಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಂಗಳಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಕೊರೋನಾ ದೃಢಪಟ್ಟಿದೆ. ಹೊಸದುರ್ಗದಿಂದ ದಿನವೂ ಗ್ರಾಮಕ್ಕೆ ಪ್ರಯಾಣ ಬೆಳೆಸಿ ಪಾಠ ಮಾಡುತ್ತಿದ್ದರು.
ಕಳೆದ ಹದಿನೈದು ದಿನಗಳಿಂದ ಶಿಕ್ಷಕರಿಗೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿದ್ದರೂ, ವಿದ್ಯಾಗಮ ಕಾರ್ಯಕ್ರಮದಡಿ ಪಾಠವನ್ನ ನಡೆಸಿಕೊಂಡು ಹೋಗಿದ್ದಾರೆ. ಹೀಗಾಗಿಯೇ ಈಗ ಎಲ್ಲರಿಗೂ ಆತಂಕ ಶುರುವಾಗಿದೆ.
ಕಳೆದ ಮೂರು ದಿನಗಳ ಹಿಂದೆ ಕೊರೋನಾ ಸೋಂಕಿನ ಬಗ್ಗೆ ತಪಾಸಣೆ ಮಾಡಿಸಿಕೊಂಡ ಶಿಕ್ಷಕರಿಗೆ ಪಾಸಿಟಿವ್ ಬಂದಿರುವುದು ತಿಳಿದಿದೆ. ಇದರಿಂದ ಸುಮಾರು 72 ವಿದ್ಯಾರ್ಥಿಗಳು, ಪಾಲಕರು ಮತ್ತು ಜೊತೆಗಿದ್ದ ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಸಂಬಂಧ 72 ವಿದ್ಯಾರ್ಥಿಗಳ ಹಾಗೂ ನಾಲ್ಕು ಶಿಕ್ಷಕರ ಗಂಟಲುದ್ರವದ ಮಾದರಿಯನ್ನ ತಪಾಸಣೆಗೆ ಕಳಿಸಲಾಗಿದ್ದು, ಮಕ್ಕಳು ಗಾಬರಿಯಾಗುವ ಅವಶ್ಯಕತೆಯಿಲ್ಲವೆಂದು ಶಾಲೆಯ ಮುಖ್ಯಾಧ್ಯಾಪಕ ಪರಮೇಶ್ವರಪ್ಪ ವಿನಂತಿಸಿದ್ದಾರೆ.