ಬಿಜೆಪಿ OBC ಅಧ್ಯಕ್ಷನಿಗೆ ಥಳಿತ: ಜೀವನ್ಮರಣದ ನಡುವೆ ಹೋರಾಟ
ವಿಜಯಪುರ: ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷರೊಬ್ಬರಿಗೆ ಮಾರಣಾಂತಿಕ ಹಲ್ಲೆಗೈದು ಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿಪಟ್ಟಣದ ಹೊರವಲಯದ ಆಲಮೇಲ ರಸ್ತೆಯಲ್ಲಿನ ಅರ್ಪಿತಾ ಡಾಬಾದಲ್ಲಿ ನಡೆದಿದೆ.
ಸಿಂದಗಿ ತಾಲೂಕಾ ಬಿಜೆಪಿ ಮಂಡಲದ ಓಬಿಸಿ ಅಧ್ಯಕ್ಷ ರವಿಕಾಂತ ನಾಯ್ಕೋಡಿ(29) ಹಲ್ಲೆಗೊಳ್ಳಗಾದವರು. ಇನ್ನು ಸಿಂದಗಿ ತಾಲೂಕಿನ ಬಬಲೇಶ್ವರ ಗ್ರಾಮದ ಅನಿಲ ಬರಗಾಲ ಹಾಗೂ ಯುವರಾಜ ರಾಂಪೂರ ಸೇರಿದಂತೆ ನಾಲ್ವರು ತಲವಾರನಿಂದ ರವಿಕಾಂತ ಮೇಲೆ ಮಾರಣಾಂತಿಕ ಹಲ್ಲೆಗೈದು ಪರಾರಿಯಾಗಿದ್ದಾರೆ.
ಡಾಬಾದಲ್ಲಿ ಕೂತಾಗ ನಾಲ್ವರು ಒಳ ಬಂದು ತಲ್ವಾರನಿಂದ ಹಲ್ಲೆ ಮಾಡಿದ್ದು, ಕೈ ಕಾಲಿಗೆ ತೀವ್ರವಾದ ಗಾಯಗಳಾಗಿವೆ. ಆಯುಧಕ್ಕೆ ಕೈ ಅಡ್ಡಲಾಗಿ ಮಾಡಿದ್ದರಿಂದ ಎಡಗೈಗೆ ತೀವ್ರ ಥರದ ಗಾಯಗಳಾಗಿವೆ.
ಇನ್ನು ಹಲವು ದಿನಗಳಿಂದ ರವಿಕಾಂತ ಓಡಾಟ ಮಾಡುತ್ತಿದ್ದ ಸ್ಥಳಗಳಿಗೆ ಈ ನಾಲ್ವರು ಹದ್ದಿನ ಕಣ್ಣಿಟ್ಟು ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.