ಸರಕಾರಿ ಶಾಲೆಗೆ ಕನ್ನ: 21ಕಂಪ್ಯೂಟರ್, ಪ್ರೋಜೆಕ್ಟರ್ ಸಮೇತ ಏನೇನು ದೋಚಿದ್ದಾರೆ ಗೊತ್ತಾ..?

ಮೈಸೂರು: ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಲೆಗೆ ಶಿಕ್ಷಕರು ನಿರಂತರವಾಗಿ ಭೇಟಿ ಕೊಡಬಾರದೆಂಬ ನಿಯಮವನ್ನೇ ಬಳಕೆ ಮಾಡಿಕೊಂಡಿರುವ ಕಳ್ಳರು, ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ತಾಂತ್ರಿಕ ಪರಿಕರಗಳನ್ನ ದೋಚಿಕೊಂಡು ಪರಾರಿಯಾಗಿರುವ ಘಟನೆ ಮೈಸೂರು ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಭವಿಸಿದೆ.
ಶಾಲೆಯ ಕಂಪ್ಯೂಟರ ಕೊಠಡಿಯಲ್ಲಿದ್ದ 21 ಕಂಪ್ಯೂಟರ್, ಒಂದು ಪ್ರೋಜೆಕ್ಟರ್, ಒಂದು ಪ್ರಿಂಟರ್, 22 ಚಾರ್ಜರ, 21 ಮೌಸ್, 21 ಕೀ ಬೋರ್ಡ್, ಸ್ಪೀಕರಗಳು, ಒಂದು ಕನವರ್ಟರ್, ಒಂದು ಹೆಡ್ ಪೋನ್ ಕಳ್ಳತನ ಮಾಡಿ ಪರಾರಿಯಾಗಿದ್ದು, ಇವೆಲ್ಲವುಗಳ ಅಂದಾಜು ಮೊತ್ತ ಎರಡೂವರೆ ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ದೈಹಿಕ ಶಿಕ್ಷಣ ಶಿಕ್ಷಕ ಕೆ.ಸಿ.ನಾಗರಾಜು ಶಾಲೆಗೆ ಬಂದು ನೋಡಿದಾಗ ಕಂಪ್ಯೂಟರ್ ಕೊಠಡಿ ತೆರೆದಿರುವುದನ್ನ ನೋಡಿ, ಒಳಗೆ ಹೋದಾಗ ತಾಂತ್ರಿಕ ಪರಿಕರಗಳು ಕಳ್ಳತನವಾಗಿರುವುದು ಗೊತ್ತಾಗಿದೆ ಎಂದು ಮುಖ್ಯಾಧ್ಯಾಪಕರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಘಟನಾ ಸ್ಥಳಕ್ಕೆ ಬಂದ ಕವಲಂದೆ ಪೊಲೀಸ್ ಠಾಣೆಯ ಅಧಿಕಾರಿಗಳು ಶ್ವಾನ ದಳ ಹಾಗೂ ಬೆರಳಚ್ಚು ತಂತ್ರಜ್ಞರಿಂದ ತಪಾಸಣೆ ನಡೆಸಿದ್ರು. ದೂರನ್ನ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.