ಬೆಚ್ಚಿ ಬೀಳಿಸಿದ್ದ ದೇಗುಲದಲ್ಲಿ ವಿಷ ಪ್ರಸಾದ ಘಟನೆ: 22 ತಿಂಗಳ ನಂತರ ಮಂದಿರ ಓಪನ್
ಚಾಮರಾಜನಗರ: ದೇಶವನ್ನೆ ಬೆಚ್ಚಿ ಬೀಳಿಸಿದ್ದ ಸೂಳ್ವಾಡಿ ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸೂಳ್ವಾಡಿ ಗ್ರಾಮದ ಕಿಚ್ಗುತ್ ಮಾರಮ್ಮ ದೇಗುಲ ರೀ ಓಪನ್ ಗೆ ದಿನಗಣನೆ ಆರಂಭವಾಗಿದೆ.
ವಿಷ ಪ್ರಸಾದ ಪ್ರಕರಣ 2018 ಡಿಸೆಂಬರ್ 14 ರಂದು ನಡೆದಿತ್ತು. ಅಂದು ದೇಗುಲದಿಂದ ನೀಡಿದ್ದ ಪ್ರಸಾದ ತಿಂದು 17 ಜನ ಸಾವಿಗಿಡಾಗಿದ್ದರೇ, 125 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಸಾವಿನ ದವಡೆಯಿಂದ ಪಾರಾಗಿದ್ದರು. 22 ತಿಂಗಳ ಬಳಿಕ ಕಿಚ್ಗುತ್ ಮಾರಮ್ಮ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ವಿಷ ಪ್ರಸಾದ ದುರಂತ ವಿವಾದ ಹಿನ್ನಲೆ ಮಾರಮ್ಮ ದೇಗುಲವನ್ನ ಸರಕಾರ ಸೀಲ್ ಮಾಡಿತ್ತು. ಅಂದು ಮುಚ್ಚಿದ್ದ ದೇವಸ್ಥಾನದ ಬಾಗಿಲನ್ನ ಇದೇ ತಿಂಗಳ 20 ರಂದು ಓಪನ್ ಮಾಡಲು ಸರ್ಕಾರದ ಸೂಚನೆ ಹಿನ್ನಲೆಯಲ್ಲಿ ಕಂದಾಯ ಅಧಿಕಾರಿಗಳು ಸೀಲ್ ತೆರವು ಮಾಡಿದ್ದಾರೆ.
ಅದಕ್ಕಾಗಿ ದೇಗುಲವನ್ನ ಶುದ್ದಗೊಳಿಸಿ ಸುಣ್ಣ ಬಣ್ಣ ಬಳಿಯುವಲ್ಲಿ ಸ್ಥಳೀಯರು ಹಾಗೂ ಅಧಿಕಾರಿಗಳು ನಿರತರಾಗಿದ್ದಾರೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸ್ಥಳೀಯ ಶಾಸಕ ಆರ್ ನರೇಂದ್ರ ದೇಗುಲದ ಓಪನ್ ಗೆ ಸರ್ಕಾರವನ್ನ ಒತ್ತಾಯಿಸಿದ್ದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ್ದ ಮುಜರಾಯಿ ಸಚಿವರು ಆಗಮಿಕರನ್ನ ನೇಮಕ ಮಾಡಿಕೊಂಡಿದ್ದು ಅಕ್ಟೋಬರ್ 20 ರ ಬಳಿಕ ನಿರ್ಬಂಧ ತೆರವು ಗೊಳಿಸಲಾಗುತ್ತದೆ ಎಂದಿದ್ದರು. ಆ ಹಿನ್ನೆಲೆಯಲ್ಲಿ ಶುಚಿಗೊಳಿಸುವ ಕಾರ್ಯ ನಡೆದಿದೆ.