Posts Slider

Karnataka Voice

Latest Kannada News

ಕುಸುಮಾ ಬಯೊಡೇಟಾದಲ್ಲೂ ಪತಿ ದಿ. ಡಿ.ಕೆ.ರವಿ ಇಲ್ಲಾ..!

Spread the love

ಬೆಂಗಳೂರು: ಅಚ್ಚರಿ ಎಂಬಂತೆ ಆರ್‌.ಆರ್‌.ನಗರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕುಸುಮಾ ಹನುಮಂತಪ್ಪ ಅವರು ತಮ್ಮ ವ್ಯಕ್ತಿ ಚಿತ್ರಣವನ್ನು ಕೆಪಿಸಿಸಿ ವಾಟ್ಸಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ.  ಅವರು ಹಂಚಿಕೊಂಡಂತೆಯೆ ಓದುಗರಿಗೆ ಅವರ ಬಯೊಡೆಟಾವನ್ನು ಒದಗಿಸುತ್ತಿದ್ದೇವೆ. ವಿಪರ್ಯಾಸ ಎಂದರೆ ಪತಿ, ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ದಿ. ಡಿ.ಕೆ. ರವಿ ಅವರ ಕುರಿತು ಯಾವುದೇ ಉಲ್ಲೇಖವನ್ನು ಕುಸುಮಾ ಹನುಮಂತಪ್ಪ ಅವರು ಮಾಡಿಲ್ಲ. ತಮ್ಮ ವಿಧ್ಯಾಭ್ಯಾಸ,  ಸಮಾಜ ಸೇವೆ ಸೇರಿದಂತೆ ತಮ್ಮ ವೈಯಕ್ತಿಕ ಮಾಹಿತಿಯನ್ನು ಕೊಟ್ಟಿದ್ದಾರೆ.

ಆದರೆ ಎಲ್ಲಿಯೂ ಕೂಡ ದಿ. ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ ಎಂದು ಬರೆದುಕೊಂಡಿಲ್ಲ. ಇದು ಇಡೀ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಪತಿ ಡಿ.ಕೆ. ರವಿ ಅವರ ಹೆಸರನ್ನು ಪ್ರಸ್ತಾಪಿಸದಿರಬಹುದು ಎಂಬುದರ ಮುನ್ಸೂಚನೆ ಎನ್ನಲಾಗುತ್ತಿದೆ. ಹಾಗಾದ್ರೆ ಅವರ ಬಯೊಡೇಟಾದಲ್ಲಿ ಏನಿದೆ? ಬದಲಾವಣೆ ಮಾಡದೆ ಅವರೆ ಕೊಟ್ಟಿರುವಂತೆ ನಿಮ್ಮ ಮುಂದಿದೆ, ಓದಿ.

ಕುಸುಮಾ ಅವರ ಪರಿಚಯ

ಸಮಾಜ ಸೇವೆ ಹಾಗೂ ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಆ ನಾಣ್ಯದ ಪರ್ಯಾಯ ಪದವಾಗಲು ರಾಜಕೀಯ ರಂಗಕ್ಕೆ  ಧುಮುಕಿರುವ ಕುಸುಮಾ ಎಚ್ ಅವರು ಇದೀಗ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ.

ಸುಶಿಕ್ಷಿತ  ಯುವಸಮುದಾಯ ರಾಜಕೀಯಕ್ಕೆ ಬರಬೇಕು, ಅವರಿಂದ ಬದಲಾವಣೆ, ಸಮಾಜದ ಸುಧಾರಣೆ ಸಾಧ್ಯ ಎಂಬ ಮಾತು ಪದೇಪದೇ ಕೇಳಿಬರುತ್ತದೆ. ಕುಸುಮಾ ಅವರು ಈ ಮಾತಿಗೆ ಅನ್ವರ್ಥವಾಗಿದ್ದಾರೆ.

ಯುವ, ವಿದ್ಯಾವಂತ, ಶಿಕ್ಷಣ ಹಾಗೂ ಸಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕುಸುಮಾ ಅವರು ಸಮಾಜ ಸುಧಾರಣೆಗೆ ಆಧುನಿಕ ಚಿಂತನೆ ಉಳ್ಳವರು. ರಾಜಕೀಯ ರಂಗದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿರುವರು. ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದಿರುವುದು ಅವರಿಗೆ ಪ್ಲಸ್ ಪಾಯಿಂಟ್.

ಬೆಂಗಳೂರಿನಲ್ಲಿ 1989ರ ಜೂನ್ 6 ರಂದು ಜನಿಸಿದ ಕುಸುಮಾ ಅವರು ಜಾತ್ಯಾತೀತ ಜನತಾದಳ ಮುಖಂಡರಾದ ಹನುಮಂತರಾಯಪ್ಪ ಅವರ ಪುತ್ರಿ. 2010ರಲ್ಲಿ ಡಾ.ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದ ಕುಸುಮಾ ಅವರು, 2018ರಲ್ಲಿ ಯೂನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎಸ್) ಪದವಿ ಪಡೆದಿದ್ದಾರೆ.

ಬೆಂಗಳೂರಿನ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ಕುಸುಮಾ ಅವರು 2016ರಿಂದ ‘ನಿರಾಂತಕ’ ಸ್ವಯಂ ಸೇವಾ ಸಂಸ್ಥೆಯಲ್ಲಿ ಪ್ರವರ್ತಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜ ಸೇವೆಯ ಜತೆಗೆ ಓದು, ಬರವಣಿಗೆಯಂತಹ ಹವ್ಯಾಸಗಳು ಕುಸುಮಾ ಅವರದ್ದಾಗಿದೆ.

ನಿರಾತಂಕ ಸ್ವಯಂ ಸೇವಾ ಸಂಘದಲ್ಲಿ ನೊಂದ ವೃದ್ಧರಿಗೆ ಮತ್ತು ಮಹಿಳೆಯರ ಪರವಾಗಿ ಕಾರ್ಯ ನಿರ್ವಹಿಸಿರುವ ಕುಸುಮಾ ಅವರು ಈಗ ರಾಜಕೀಯ ಪ್ರವೇಶಿಸಿ ಜನ ಸೇವೆಗೆ ಮುಂದಾಗಿದ್ದಾರೆ. ಚುನಾವಣಾ ಕಣದಲ್ಲಿ ಆ ಸೇವೆಯ ಮತ್ತೊಂದು ಮೆಟ್ಟಿಲು ಏರಲು ಉತ್ಸುಕರಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬೇಕೆಂಬ ಅವರ ಆಕಾಂಕ್ಷೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈಗ ನೀರೆರಿದ್ದಾರೆ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಸದಾ ಮುಂದು ಎಂಬುದಕ್ಕೆ ಇದೊಂದು ನಿದರ್ಶನ.


Spread the love

Leave a Reply

Your email address will not be published. Required fields are marked *