ಸಧ್ಯಕ್ಕೆ ಶಾಲೆ-ಕಾಲೇಜು ಆರಂಭಿಸಬೇಡಿ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕೊರೋನಾ ವೈರಸ್ ಆತಂಕ ಇಡೀ ದೇಶದಲ್ಲಿ ಇನ್ನೂ ಕಡಿಮೆಯಾಗುತ್ತಿಲ್ಲ. ಈ ಮಧ್ಯೆ ಶಾಲೆ ಆರಂಭಿಸಲು ಸೂಚಿಸಿ ಕೇಂದ್ರ ಸರ್ಕಾರ ಮಾರ್ಗಸೂಚಿಸಿ ಬಿಡುಗಡೆ ಮಾಡಿದೆ. ಆದರೆ, ಅಂತಿಮ ನಿರ್ಧಾರ ಕೈಗೊಳ್ಳುವ ಹೊಣೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಇದೇ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಎಲ್ಲ ಶಾಸಕರಿಗೆ ಪತ್ರ ಬರೆದು ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿಕೊಂಡಿದೆ.
ಜೊತೆಗೆ ಆರೋಗ್ಯ ಇಲಾಖೆಗೂ ಸೂಕ್ತ ಅಭಿಪ್ರಾಯ ಕೊಡುವಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಆರೋಗ್ಯ ಇಲಾಖೆಗೆ ಕೇಳಿಕೊಂಡಿದ್ದಾರೆ.
ಕೊರೋನಾ ಆತಂಕದ ಮಧ್ಯೆ ಶಾಲೆ ಆರಂಭಿಸುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕೊರೋನಾ ಆತಂಕದ ನಡುವೆ ಶಾಲೆ ಆರಂಭಿಸುವುದು ಸೂಕ್ತವಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
ಶಾಲೆ, ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೊರೋನಾ ಕುರಿತಂತೆ ಪೋಷಕರಲ್ಲಿ ಆತಂಕವಿದೆ. ಮಕ್ಕಳ ಜೀವನದ ಜೊತೆ ಚೆಲ್ಲಾಟ ಬೇಡ. ಸರಕಾರ ಶಾಲೆ ಆರಂಭಿಸುವ ನಿರ್ಧಾರ ಕೈಬಿಡಬೇಕು ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಶಾಲಾ-ಕಾಲೇಜುಗಳ ಆರಂಭ ಬೇಡ. ಸೂಕ್ತ ಸಿದ್ಧತೆ ಇಲ್ಲದೇ ಶಾಲಾಕಾಲೇಜು ಆರಂಭಿಸಬೇಡಿ ಎಂದು ಹೆಚ್.ಡಿ.ಕೆ ಸಲಹೆ ನೀಡಿದ್ದಾರೆ.