Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಕೋವಿಡ್-19 ಮರಣ ಪ್ರಮಾಣ ಹೆಚ್ಚು: ವಿಶೇಷ ತಂಡ ರಚನೆಗೆ ಸಿಎಂ ಆದೇಶ

Spread the love

ಬೆಂಗಳೂರು: ಕೋವಿಡ್ 19 ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಿ, ನಿಗದಿತ ಪರೀಕ್ಷೆಗಳನ್ನು ಮಾಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಾಂಕ್ರಾಮಿಕ ರೋಗ ತಡೆ ಹಾಗೂ ಸಾವಿನ ಪ್ರಮಾಣ ತಡೆಯಲು ಹೆಚ್ಚಿನ ಪ್ರಯತ್ನ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅವರ ಅಧ್ಯಕ್ಷತೆಯಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿರುವ ಹತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒಗಳೊಂದಿಗೆ ಅವರು ವೀಡಿಯೋ ಸಂವಾದ ನಡೆಸಿದರು. ಸಾಂಕ್ರಾಮಿಕ ರೋಗಕ್ಕೆ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು ಮತ್ತು ಸಾಮಾಜಿಕ ಅಂತರವೇ ಮದ್ದು ಎಂಬುದನ್ನು ಜನರು ಅರಿಯಬೇಕು; ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದು ಅರಿವಿನ ಒಂದು ಭಾಗವೇ ಹೊರತು ಸರ್ಕಾರಕ್ಕೆ ಇದರಿಂದ ಬೇರೆ ಉದ್ದೇಶ ಇಲ್ಲ ಎಂಬುದನ್ನು ಜನತೆಗೆ ಮನಗಾಣಿಸಬೇಕು ಎಂದು ಸೂಚಿಸಿದರು.

ಜನ ಜಾಗೃತಿ ಮುಖಾಂತರ ಮುನ್ನೆಚ್ಚರಿಕೆಯೊಂದಿಗೆ ರೋಗ ತಡೆಯಲು ಸೂಕ್ತ ಕ್ರಮಕೈಗೊಳ್ಳಬೇಕಿದೆ. ಈ ಸಂಬಂಧ ಅಗತ್ಯಗಳಿದ್ದರೆ ಹಿಂಜರಿಯದೆ ನೇರವಾಗಿ ಹೇಳಿ; ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿದ್ದು, ಪಡೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಕೋವಿಡ್ 19 ಸಂಬಂಧಿಸಿದ ಎಸ್.ಒ.ಪಿಗಳನ್ನು ಪಾಲಿಸಿ, ಮರಣ ಪ್ರಮಾಣ ಹೆಚ್ಚದಂತೆ ಕಾಳಜಿ ವಹಿಸಿ ಎಂದರು.

ಕೋವಿಡ್ 19 ಪ್ರಕರಣಗಳು ಹೆಚ್ಚಾಗಿರುವ ಬಳ್ಳಾರಿ, ದಕ್ಷಿಣ ಕನ್ನಡ, ಹಾಸನ, ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತುಲನಾತ್ಮಕ ಅಧ್ಯಯನದೊಂದಿಗೆ ಕೋವಿಡ್ 19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಡೆತ್ ಆಡಿಟ್ ಬಗ್ಗೆ ಪರಿಶೀಲಿಸಿದ ಸಿಎಂ ಯಡಿಯೂರಪ್ಪ ಅವರು, ಧಾರವಾಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಒಂದು ವಿಶೇಷ ತಂಡ ರಚಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಜೊತೆಗೆ ಇದಕ್ಕೆ ಕಾರಣವಾಗಿರುವ ಲೋಪಗಳನ್ನು ತಿದ್ದಿಕೊಂಡು ಎಲ್ಲರ ಸಹಕಾರದೊಂದಿಗೆ ರೋಗ ಪ್ರಮಾಣ ಮತ್ತು ಮರಣ ಪ್ರಮಾಣಕ್ಕೆ ಕಡಿವಾಣ ಹಾಕಲು ಸೂಚಿಸಿದರು.

ಜಿಲ್ಲೆಗಳಲ್ಲಿ ಆರ್.ಎ.ಟಿ ಪರೀಕ್ಷೆಗಳನ್ನು ಹೆಚ್ಚು ಮಾಡುತ್ತಿದ್ದು, ಇದನ್ನು ಕಡಿಮೆ ಮಾಡಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು ಎಂದು ಸೂಚಿಸಲಾಯಿತು. ಮನೆ ಆರೈಕೆಯಲ್ಲಿರುವವರಿಗೆ ಟೆಲಿ ಮಾನಿಟರಿಂಗ್ ಮುಖಾಂತರ ಆರೋಗ್ಯ ತಪಾಸಣೆಯನ್ನು ಕಾಲಕಾಲಕ್ಕೆ ಮಾಡಬೇಕು ಹಾಗೂ ಆರೋಗ್ಯ ಕಿಟ್‌ಳನ್ನು ಕೊಡಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ಪಾಸಿಟಿವ್ ಪ್ರಕರಣಗಳನ್ನು ಕಡಿಮೆ ಮಾಡಲು ಸಮೀಕ್ಷೆ ಮಾಡಿ ತಪಾಸಣೆ ಕೈಗೊಳ್ಳಬೇಕು. ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಅನಿವಾರ್ಯ ಇದ್ದಲ್ಲಿ ಮಾತ್ರ ಆರ್.ಎ.ಟಿ ಪರೀಕ್ಷೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆಗಳಲ್ಲಿ ದಾಖಲಾದ ನಂತರ 72 ಗಂಟೆಗಳೊಳಗೆ ಆಗಿರುವ ಮರಣಗಳ ಕಾರಣವನ್ನು ತಿಳಿಯಲು ಮರಣಗಳ ಆಡಿಟ್ ಮಾಡಬೇಕು. ರಾಜ್ಯದಲ್ಲಿ ಶೇ 50 ರಷ್ಟು ಮರಣಗಳು ಮೊದಲ 72 ಗಂಟೆಗಳಲ್ಲಿ ಆಗಿವೆ. ಹಾಗಾಗಿ ಪರೀಕ್ಷೆಗಳನ್ನು ಮಾಡಿ ಸೋಂಕು ಪತ್ತೆ ಹಚ್ಚುವುದು ಅತಿ ಮುಖ್ಯ ಎಂಬ ತೀರ್ಮಾನಕ್ಕೆ ಸಭೆಯಲ್ಲಿ ಬರಲಾಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಕ್ಲಿನಿಕಲ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.


Spread the love

Leave a Reply

Your email address will not be published. Required fields are marked *