ಮಳೆಗೆ ತತ್ತರ: ರಾತ್ರಿಪೂರ್ತಿ ನಿದ್ದೆ ಮಾಡದ ನವಲಗುಂದ ನೀರಾವರಿ ಕಾಲನಿ ಜನ

ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮಳೆ ಆವಾಂತರವನ್ನೇ ಸೃಷ್ಟಿ ಮಾಡಿದ್ದು, ನೀರಾವರಿ ಕಾಲನಿಯ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಮಹಿಳೆಯರು, ಮಕ್ಕಳು ಮಲಗಲು ಜಾಗವಿಲ್ಲದೇ ಇಡೀ ರಾತ್ರಿ ಜಾಗರಣೆ ಮಾಡಿದ ಘಟನೆ ನಡೆದಿದೆ.
ನಿನ್ನೆ ಮಧ್ಯಾಹ್ನದಿಂದಲೂ ನಿರಂತರವಾಗಿ ಸುರಿಯುತ್ತಿದ್ದ ಮಳೆ ರಾತ್ರಿಯಾದ ಮೇಲೆ ಮತ್ತಷ್ಟು ಹೆಚ್ಚಾಗಿದೆ. ಇದರಿಂದ ನೀರಾವರಿ ಕಾಲನಿಯ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬಹುತೇಕ ಮನೆಗಳಲ್ಲಿ ಒಂದು ಅಡಿಗಿಂತಲೂ ಹೆಚ್ಚು ನೀರು ಒಳಗೆ ಬಂದಿದ್ದರಿಂದ, ಕೆಳಗೆ ಮಲಗುತ್ತಿದ್ದವರಿಗೆ ಅವಕಾಶವೇ ಇಲ್ಲದಂತಾಗಿತ್ತು. ಹೀಗಾಗಿ ಮಕ್ಕಳನ್ನ ಸಿಕ್ಕ ಜಾಗದಲ್ಲೇ ಮಲಗಿಸುವ ಪ್ರಯತ್ನ ಮಾಡಿದರಾದರೂ, ಆತಂಕದಲ್ಲಿದ್ದರಿಂದ ಯಾರೂ ಕೂಡಾ ಸರಿಯಾಗಿ ನಿದ್ದೆ ಮಾಡಿಲ್ಲ.
ಕೆಲವೆಡೆ ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು, ಅಲ್ಲಿಯೇ ಮನೆಯವರು ಇರಬೇಕಾದ ಪ್ರಸಂಗ ಬಂದಿದೆ. ಬಿದ್ದಿರುವ ಮನೆ, ನೀರು ಹೊಕ್ಕಿರುವ ಕಾಲನಿಗಳ ಸ್ಥಿತಿಗೆ ಮಳೆಯ ಆವಾಂತರವೇ ಕಾರಣವಾಗಿದೆ.