ಮುಖ್ಯ ಶಿಕ್ಷಕ ಕೊರೋನಾಗೆ ಬಲಿ: 20ಕ್ಕೂ ಹೆಚ್ಚು ಶಿಕ್ಷಕರಿಗೆ ಪಾಸಿಟಿವ್ ಶಂಕೆ

ಚಾಮರಾಜನಗರ: ಹಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯ ಶಿಕ್ಷಕರೋರ್ವರು ಚಿಕಿತ್ಸೆ ಫಲಿಸದೇ ಕೋವಿಡ್-19 ವಾರ್ಡನಲ್ಲಿ ತೀರಿಕೊಂಡ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಕೊಳ್ಳೇಗಾಲದ ಗುರುಮಲ್ಲೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಉಮಾಪತಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಮುಖ್ಯ ಶಿಕ್ಷಕರಾಗಿದ್ದರಿಂದ ಶಾಲೆ ಮತ್ತು ವಿದ್ಯಾರ್ಥಿಗಳ ಸಂಪರ್ಕ ಹೊಂದಿದ್ದ ಉಮಾಪತಿಯವರಿಗೆ ಮೊದಲು, ಜ್ವರ ಬಂದು ಕಡಿಮೆಯಾಗಿತ್ತು. ಅದಾದ ನಂತರ ನಿರಂತರವಾಗಿ ಕೆಮ್ಮು, ಕಫ ಹೆಚ್ಚಾಗಿದ್ದರಿಂದ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲಾಗಿತ್ತು.
ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಮುಂದಾಗಿದ್ದ ಉಮಾಪತಿಯವರು, ಚಿಕಿತ್ಸೆ ಫಲಿಸದೇ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಉಮಾಪತಿಯವರಿಂದ ಸಾವಿನಿಂದ ಜಿಲ್ಲೆಯಲ್ಲಿ ಮೃತರಾದ ಶಿಕ್ಷಕರ ಸಂಖ್ಯೆ ಎರಡಕ್ಕೇರಿದೆ. ಈ ಹಿಂದೆ ದೈಹಿಕ ಶಿಕ್ಷಕ ಶಿಕ್ಷಕರೋರ್ವರು ಕೊರೋನಾದಿಂದಲೇ ಸಾವಿಗೀಡಾಗಿದ್ದರು.
ಚಾಮರಾಜನಗರ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎನ್ನಲಾಗಿದ್ದು, ಕೆಲವರಿಗೆ ಈಗಾಗಲೇ ಚೇತರಿಕೆ ಕಂಡು ಬಂದಿದೆ. ಶಿಕ್ಷಕ ಸಮೂಹದಲ್ಲಿ ಮೂಡಿರುವ ಆತಂಕ ಜಿಲ್ಲೆಯಲ್ಲಿ ಉಮಾಪತಿಯವರ ಸಾವಿನಿಂದ ಮತ್ತಷ್ಟು ಹೆಚ್ಚಾಗಿದೆ.