ನನ್ನಿಂದಲೇ ಆಗಿರೋದು- ಬೇಕಿದ್ದರೇ ಶಾಸಕರು ಸಾಬೀತುಪಡಿಸಲಿ- ವಿಜಯಕುಮಾರ ಪಾಟೀಲ
ವಿಜಯಪುರ: ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಶಾಸಕರ ಮನವಿಯ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಬಲೇಶ್ವರ ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೇರಿಸಿದ್ದನ್ನು ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಶಾಸಕರು ಸಾಬೀತುಪಡಿಸಲಿ, ಒಂದು ವೇಳೆ ಸಾಬೀತುಪಡಿಸಿದರೆ ತಕ್ಷಣವೇ ರಾಜಕೀಯದಿಂದಲೇ ನಿವೃತ್ತಿ ಹೊಂದುವೆ ಎಂದು ಬಿಜೆಪಿ ಮುಖಂಡ ವಿಜಯಕುಮಾರ ಪಾಟೀಲ ಬಹಿರಂಗ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಸವಾಲು ಹಾಕಿದ ಅವರು, ಬಬಲೇಶ್ವರ ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೆ, ನನ್ನ ಮನವಿ ಮೇರೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಅದನ್ನೇ ನಾವು ಮಾಡಿದ್ದಾಗಿ ಕಾಂಗ್ರೆಸ್ ಶಾಸಕರು ಕರಪತ್ರ ಹಂಚುತ್ತಿರುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.
ಆರು ವರ್ಷ ಅವರೇ ಸಚಿವರಾಗಿದ್ದಾಗ ಆಗದ ಕಾರ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೇಗಾಯಿತು? ಎಂಬುದನ್ನು ಅವರು ಅರಿತುಕೊಳ್ಳದೇ ಮಾತನಾಡುತ್ತಿದ್ದಾರೆ. ಬಿಜೆಪಿಗೆ ತಾವೇ ಪತ್ರ ಬರೆದಿದ್ದಾಗಿ ಶಾಸಕರು ಹಂಚುವ ಕರಪತ್ರದಲ್ಲಿ ಕಡತ ಸಂಖ್ಯೆಯೂ ತಪ್ಪಾಗಿದೆ. ಕಡತದ ಅಂಕಿ ಸಂಖ್ಯೆ ಅರಿಯದವರಿಂದ ಪಟ್ಟಣ ಪಂಚಾಯ್ತಿ ಮೇಲ್ದರ್ಜೆಗೇರಲು ಸಾಧ್ಯವೇ ಎಂದು ವಿಜುಗೌಡ ಪಾಟೀಲ ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಪಿಎಂಜಿಎಸ್ವೈ ಮೊದಲಾದ ಯೋಜನೆಗಳ ಅಡಿಯಲ್ಲಿ ನಿರ್ಮಾಣಗೊಳ್ಳುವ ರಸ್ತೆಗಳಿಗೂ ಶಾಸಕರು ತಾವೇ ಭೂಮಿ ಪೂಜೆ ಮಾಡುತ್ತಾರೆ, ಕನಿಷ್ಠ ಪಕ್ಷ ನಮ್ಮ ಪಕ್ಷದ ಸಂಸದರ ಭಾವಚಿತ್ರವನ್ನಾದರೂ ಇರಿಸಬೇಕಲ್ಲವೇ? ಕೇಂದ್ರ ಸರ್ಕಾರದ ಯೋಜನೆಗಳನ್ನೇ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.
ಬಬಲೇಶ್ವರ ಕ್ಷೇತ್ರದಲ್ಲಿ ನಾನು ಸೋತಿರಬಹುದು, ನಾನು ಯಾವ ರೀತಿ ಸೋಲು ಅನುಭವಿಸಿದ್ದೇನೆ, ಕಾಂಗ್ರೆಸ್ ಶಾಸಕರು ಯಾವ ರೀತಿ ಜಯ ಸಾಧಿಸಿದ್ದಾರೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ನಾನು ಜನರ ಮನಸ್ಸಿನಲ್ಲಿ ಇದ್ದೇನೆ, ಹಲವಾರು ಅಭಿವೃದ್ಧಿ ಕಾವiಗಾರಿಗಳ ಶಿಲಾನ್ಯಾಸಕ್ಕಾಗಿ ಶಿಷ್ಠಾಚಾರದ ಹೆಸರಿನಲ್ಲಿ ನನ್ನನ್ನು ದೂರ ಇರಿಸುತ್ತಾರೆ, ಗ್ರಾ.ಪಂ. ಸದಸ್ಯನೂ ಅಲ್ಲ, ಗಿರಾಕಿ ಎಂಬಿತ್ಯಾದಿ ಪದ ಪ್ರಯೋಗಿಸಿ ನನ್ನನ್ನು ನಿಂದಿಸುವುದು ಬಬಲೇಶ್ವರ ಶಾಸಕರ ವ್ಯಕ್ತಿತ್ವಕ್ಕೆ ಶೋಭೆಯಲ್ಲ. ಇನ್ನೊಂದೆಡೆ ಪ್ರೋಟೋಕಾಲ್ ಮರೆತು ತಮ್ಮ ಪುತ್ರನಿಂದ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ಶಿಷ್ಠಾಚಾರ ಏಕೆ ನೆನಪಾಗಲಿಲ್ಲ ಎಂದು ಪ್ರಶ್ನಿಸಿದರು.
ಪೂರ್ವ ಜಿಲ್ಲಾಧಿಕಾರಿ ವೈಎಸ್ಪಿ ಮೇಲೂ ವಾಗ್ದಾಳಿ
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ವೈ.ಎಸ್. ಪಾಟೀಲ ಅವರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ವಿಜುಗೌಡರು, ಈಗ ವಿಜಯಪುರ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ ಬಂದಿದ್ದಾರೆ, ಅವರು ಬಂದ ನಂತರ ನಾವು ಉಸಿರಾಡುತ್ತಿದ್ದೇವೆ, ಹಿಂದಿನ ಜಿಲ್ಲಾಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಡಿಎಚ್ಓನ್ನೇ ಹೊರಗಿಟ್ಟು ಕೇವಲ ಡಾ.ಮಲ್ಲನಗೌಡ ಬಿರಾದಾರ ಅವರನ್ನು ಮುಂದಾಳತ್ವ ನೀಡಿದ್ದರು. ಈ ಎಲ್ಲ ವಿಷಯಗಳ ಬಗ್ಗೆ ಇನ್ನೊಂದು ಬಾರಿ ಬಹಿರಂಗವಾಗಿ ಹೇಳುವೆ ಎಂದರು.
ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿದ್ದ ಅಧಿಕಾರಿಗಳೇ ಇನ್ನೂ ಜಿಲ್ಲೆಯಲ್ಲಿದ್ದಾರೆ. ನಮ್ಮ ವರಿಗೇ ಕೆಲವರಿಗೆ ಬುದ್ದಿಯಿಲ್ಲ. ಅದೇ ಅಧಿಕಾರಿಗಳು ನಮಗೆ ತುಳಿಯುತ್ತಿರುವುದು ಗೊತ್ತಾಗುತ್ತಿಲ್ಲ. ಕೆಲ ಅಧಿಕಾರಿಗಳು ಬೇರೂರಿದ್ದು ಅವರನ್ನು ಎತ್ತಂಗಡಿ ಮಾಡಬೇಕು. ನಮ್ಮ ಪಕ್ಷದಲ್ಲಿ ಯೇ ಕೆಲ ಹೊಂದಾಣಿಕೆ ರಾಜಕಾರಣ ಇರುವ ಕಾರಣ ಹೀಗಾಗುತ್ತಿದೆ ಎಂದರು.
ಹೊAದಾಣಿಕೆ ರಾಜಕಾರಣದ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ. ಡಿಸಿಎಂ ಗೋವಿಂದ ಕಾರಜೋಳ ಅವರು ಸಹ ಸಿಎಂ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಆ ಬಗ್ಗೆ ನಾನು ಹೆಚ್ಚೇನೂ ಮಾತಾಡಲ್ಲ ಎಂದರು.
ಅತೀವೃಷ್ಟಿ ಹಿನ್ನೆಲೆ ಬಬಲೇಶ್ವರ ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಪಾರ ಬೆಳೆ ಹಾನಿಯಾಗಿದೆ. ಈ ಬಗ್ಗೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ತ್ವರಿತ ವಾಗಿ ಪರಿಹಾರ ನೀಡಲು ಮನವಿ ಮಾಡಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟೆ, ಈರಣ್ಣ ಕಿರಣಗೊಂಡ, ಸಾಬು ಮಾಶ್ಯಾಳ, ಅಲ್ಲಿಸಾ ಪಟೇಲ, ಸಂದೀಪ ಪಾಟೀಲ, ಸಾಹೇಬಗೌಡ ಬಿರಾದಾರ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಧರ್ಮಗುರುಗಳ ಮೇಲೆ ಚಪ್ಪಲಿ ಎಸೆದವರಿಗೆ ನಮ್ಮ ಪಕ್ಷದಲ್ಲಿ ಪ್ರವೇಶ ಇಲ್ಲ : ವಿಜುಗೌಡ
ವಿಜಯಪುರ : ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತರನ್ನು ಸೆಳೆಯುವ ಕೆಲಸ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಗೆ ವಿಜಯಕುಮಾರ ಪಾಟೀಲ ಅವರು ನೀಡಿದ ಪ್ರತಿಕ್ರಿಯೆ ಇದು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಕೆಲವು ನಾಯಕರು ಈ ನಿಟ್ಟಿನಲ್ಲಿ ನಾಯಕತ್ವ ವಹಿಸಿದ್ದು ನನಗೆ ಗೊತ್ತಿಲ್ಲ, ಬಿಜೆಪಿ ತತ್ವ-ಸಿದ್ಧಾಂತಗಳಿಗೆ ಬದ್ಧವಾದ ಪಕ್ಷ, ಧರ್ಮ ಒಡೆದವರಿಗೆ, ಧರ್ಮಗುರುಗಳ ಮೇಲೆ ಚಪ್ಪಲಿ ಎಸೆದವರಿಗೆ ನಮ್ಮ ಪಕ್ಷದಲ್ಲಿ ಪ್ರವೇಶ ಇಲ್ಲ, ಹೀಗಾಗಿ ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬುದು ಶತಸಿದ್ಧ. ಏತನ್ಮಧ್ಯೆ ಈ ವಿಷಯವೂ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು ಎಂದರು.
ಡೋಣಿ ನದಿಯಲ್ಲಿ ಈಜುವ ಚಟ ನನಗಿಲ್ಲ. ಡೋಣಿ ಕೆಲ ಕಾಲ ಅಬ್ಬರಿಸುತ್ತದೆ. ಬಳಿಕ ಬತ್ತಿ ಹೋಗುತ್ತದೆ. ನಮ್ಮ ಪಕ್ಷ ಧರ್ಮಕ್ಕೆ ಪ್ರಾಧಾನ್ಯತೆ ನೀಡುತ್ತದೆ. ಅಂಥ ಧರ್ಮ ಒಡೆದವರಿಗೆ, ಧರ್ಮಗುರುಗಳಿಗೆ ಅವಮಾನಿಸಿದವರಿಗೆ ನಮ್ಮ ಪಕ್ಷದಲ್ಲಿ ಅವಕಾಶ ನೀಡಲ್ಲ ಎಂಬ ಆತ್ಮ ವಿಶ್ವಾಸ ನನ್ನಲ್ಲಿ ಇದೆ ಎಂದರು.