ಆ ಹುಡುಗಿಯ ಶವ ಸಿಕ್ಕಿದೆ- ಆಕೆ NWRTC ನೌಕರರ ಸಹಕಾರಿ ಸಂಘದ ಅಧ್ಯಕ್ಷರ ಮಗಳು…!
ಉತ್ತರಕನ್ನಡ-ಹುಬ್ಬಳ್ಳಿ: ಬುಧವಾರ ಬೆಳಿಗ್ಗೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಕಾರ್ ವಾಸಿಂಗ್ ಸೆಂಟರ್ ನಡೆಸುತ್ತಿರುವ ಮಾಲೀಕರ ಕಾರು ತೆಗೆದುಕೊಂಡು ಹೋಗಿದ್ದ ನಾಲ್ವರು ತಡರಾತ್ರಿ ಸಿದ್ಧಾಪುರ ಬಳಿ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದು 24 ಗಂಟೆಯ ನಂತರ ಹುಬ್ಬಳ್ಳಿ ಯುವತಿಯ ಶವ ದೊರಕಿದೆ.
ಹುಬ್ಬಳ್ಳಿ ಕೇಶ್ವಾಪುರದ ನಿವಾಸಿಯಾಗಿರುವ ಮಹಾವೀರ ದೇವಕ್ಕಿ ಎನ್ನೋರಿಗೆ ಸೇರಿದ ಕಾರನ್ನ ಉಚ್ಚಂಗಿ ಪಾಲ್ಸಗೆ ಹೋಗಿ ಬರುತ್ತೇವೆ ಎಂದು ತೆಗೆದುಕೊಂಡು ಹೋಗಿದ್ದ,ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರೇ ಸಿದ್ಧಾಪುರ ತಾಲೂಕಿನ ಹೆಗ್ಗರಣಿ ಕೋಡನಮನೆ ಬಳಿಯ ಹಳ್ಳದಲ್ಲಿ ಕಾರು ಸಮೇತ ಬಿದ್ದು ಸಾವಿಗೀಡಾಗಿದ್ದರು.
ವೃತ್ತಿಯಲ್ಲಿ ಚಾಲಕನಾಗಿರುವ ಕೇಶ್ವಾಪುರ ನಿವಾಸಿ ನಿಶ್ಚಿಲ ಹಿರೇಮಠ, ಬೆಂಗಳೂರು ಮೂಲದ ಹುಬ್ಬಳ್ಳಿ ಕೆಎಲ್ ಇ ಕಾಲೇಜಿನ ಬಿಇ ವಿದ್ಯಾರ್ಥಿ ರೋನಿತ ಹಾಗೂ ಸುಶ್ಮಿತಾ ಶವಗಳು ನಿನ್ನೆ ಕೆರೆಯಲ್ಲಿ ಸಿಕ್ಕಿದ್ದವು.
ಇನ್ನೋರ್ವ ಯುವತಿಯ ಶವಕ್ಕಾಗಿ ನಿನ್ನೆಯಿಂದಲೂ ಹುಡುಕಾಟ ಆರಂಭವಾಗಿತ್ತು. ಇದೀಗ ಕೆಲವೇ ನಿಮಿಷಗಳ ಹಿಂದೆ ಅಕ್ಷತಾ ಹಿರೇಮಠ ಶವವೂ ದೊರಕಿದೆ. ಅಕ್ಷತಾ ಹಿರೇಮಠ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಎಸ್ ಬಿ ಹಿರೇಮಠ ಅವರ ಮಗಳಾಗಿದ್ದಾಳೆ.