ವಿಜಯದಶಮಿಯಂದೇ ಕೋಡಿ ಬಸವೇಶ್ವರ ದೇವಸ್ಥಾನದ ಹುಂಡಿ ಲೂಟಿ
ಹಾವೇರಿ: ವಿಜಯದಶಮಿಯ ದಿನದಂದು ಭಗವಂತ ಎಲ್ಲರಿಗೂ ಒಳ್ಳೆಯದನ್ನ ಮಾಡಲಿ ಎಂದು ವಿಶೇಷ ಪೂಜೆ ಸಲ್ಲಿಸುತ್ತಿರುವಾಗ, ಕೋಡಿ ಬಸವೇಶ್ವರ ದೇವಸ್ಥಾನದ ಹುಂಡಿಯನ್ನ ಲೂಟಿ ಮಾಡಿ, ಕೆರೆಯಲ್ಲಿ ಒಗೆದು ಹೋದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿ ನಡೆದಿದೆ.
ದೇವಸ್ಥಾನದಲ್ಲಿರುವ ಬೆಳ್ಳಿ ಆಭರಣದ ಜೊತೆಗೆ ಹುಂಡಿಯಲ್ಲಿದ್ದ ಸಾವಿರಾರೂ ರೂಪಾಯಿ ಹಣವನ್ನ ದೋಚಿಕೊಂಡು ಪರಾರಿಯಾಗಿದ್ದಾರೆ. ಹುಂಡಿಯನ್ನ ಒಡೆದು ಹಣ ತೆಗೆದುಕೊಂಡು ಹುಂಡಿಯನ್ನ ಕೆರೆಗೆ ಎಸೆದು ಹೋಗಿದ್ದಾರೆ. ಭಕ್ತಾಧಿಗಳು ದಶಮಿಯ ನಿಮಿತ್ತ ದೇವಸ್ಥಾನಕ್ಕೆ ಹೋದ ಸಮಯದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ದಶಮಿಯ ದಿನದಂದೇ ಉದ್ದೇಶಪೂರ್ವಕವಾಗಿ ಕಳ್ಳತನ ಮಾಡಿದ್ದು, ಭಕ್ತ ಸಮೂಹದಲ್ಲಿ ಗೊಂದಲ ಸೃಷ್ಟಿ ಮಾಡುವುದಕ್ಕೆ ಹೀಗೆ ಮಾಡಲಾಗಿದೆ ಎನ್ನಲಾಗಿದ್ದು, ಆಡೂರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.