ರಮೇಶ ಜಾರಕಿಹೊಳಿ ಬಿಜೆಪಿಗೆ ನನ್ನ ಕರೆದ್ರು.. ನಾನೂ…: ಮಾಜಿ ಸಚಿವ ವಿನಯ ಕುಲಕರ್ಣಿ
ಬೆಳಗಾವಿ: ಮಾಜಿ ಸಚಿವ ಹಾಗೂ ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿರುವ ವಿನಯ ಕುಲಕರ್ಣಿಯವರು ಭಾರತೀಯ ಜನತಾ ಪಕ್ಷಕ್ಕೆ ಸೇರುವ ಮತ್ತು ಸೇರಿಸಿಕೊಳ್ಳುವ ಮಾತುಗಳು ನಿರಂತರವಾಗಿ ಕೇಳಿ ಬರುತ್ತಿದ್ದು, ಇಂದು ಕೂಡಾ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಆಹ್ವಾನ ಬಂದಿರುವುದನ್ನ ವಿನಯ ಕುಲಕರ್ಣಿ ಹೇಳಿ, ಅದನ್ನ ನಯವಾಗಿ ತಿರಸ್ಕರಿಸಿದ್ದೇನೆಂದು ಹೇಳಿದ್ದಾರೆ.
ಬಿಜೆಪಿಗೆ ಬರುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕರೆದರು. ಆದರೆ, ನಾನು ಅವರಿಗೆ ಕೈಮುಗಿದು ನಮಸ್ಕಾರ ಮಾಡಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮಿಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ವೇದಿಕೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ, ವಿನಯ್ ವಿನಯ ಕುಲಕರ್ಣಿಗೆ ಬಿಜೆಪಿಗೆ ಬರುತ್ತೀಯಲ್ಲ ಎಂದು ಆಹ್ವಾನ ನೀಡಿದ ಪ್ರಸಂಗ ನಡೆಯಿತು. ಈ ವೇಳೆ ವಿನಯ್ ಕುಲಕರ್ಣಿ, ಸಚಿವ ಜಾರಕಿಹೊಳಿಗೆ ಕೈಮುಗಿದು ಕುಳಿತುಕೊಂಡರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ, ನಾನು ಬಿಜೆಪಿಗೆ ಸೇರುವ ಬಗ್ಗೆ ಎಲ್ಲಿಯೂ ಚರ್ಚೆ ನಡೆಸಿಲ್ಲ. ನಾನು ನನ್ನ ಹೊಲ ಬಿಟ್ಟು ಎಲ್ಲಿಯೂ ಹೋಗಿಲ್ಲ. ಆದರೆ, ನಾನು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂಬ ಚರ್ಚೆ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ನನಗೆ ಬಿಜೆಪಿಗೆ ಬರುವಂತೆ ಹೇಳಿದರು. ಆದರೆ ಎಲ್ಲರ ಮುಂದೆ ಕೈಮುಗಿದು ಅವರಿಗೆ ನಮಸ್ಕಾರ ಮಾಡಿದೆ. ಬಿಜೆಪಿಗೆ ಸೇರುವ ಯೋಚನೆಯಿಲ್ಲ ಎಂದು ಹೇಳಿದರು.
ವಿನಯ ಕುಲಕರ್ಣಿ ಪಕ್ಷ ಸೇರುವ ಬಗ್ಗೆ ಯಾರೊಂದಿಗೆ ಮಾತುಕತೆ ನಡೆದಿಲ್ಲ ಎಂಬುದನ್ನ ಬಿಜೆಪಿ ಮುಖಂಡರು ಹೇಳಿರುವುದನ್ನೂ ಇಲ್ಲಿ ಸ್ಮರಿಸಬಹುದು.

