ದೇವಿಯ ಪ್ರಸಾದ 75ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ- ಗ್ರಾಮದಲ್ಲಿ ಆತಂಕ
1 min readಮಂಡ್ಯ: ಸುಳ್ವಾಡಿಯ ಪ್ರಕರಣದ ಇನ್ನೂ ಹಚ್ಚ ಹಸಿರಿರುವಾಗಲೇ ಮತ್ತೊಂದು ಪ್ರಸಾದ ಸ್ವೀಕರಿಸಿ ಭಕ್ತರು ಅಸ್ವಸ್ಥಗೊಂಡ ಪ್ರಕರಣ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದೇವತೆಯಾದ ಮಾರಮ್ಮನ ದೇವಸ್ಥಾನದಲ್ಲಿಂದು ಪ್ರಸಾದವನ್ನ ಆಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳು, ಮಹಿಳೆಯರು, ಹಿರಿಯರು ಪ್ರಸಾದವನ್ನ ಸ್ವೀಕರಿಸಿದ್ದರು. ಇದಾದ ನಂತರ ಕೆಲವೇ ನಿಮಿಷಗಳಲ್ಲಿ ವಾಂತಿ-ಭೇದಿ ಆರಂಭವಾಗಿದ್ದು, 75ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ.
ತೀವ್ರವಾಗಿ ಅಸ್ವಸ್ಥಗೊಂಡವರನ್ನ ಮಳವಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿಗಳು ಸಿಬ್ಬಂದಿ ಸಮೇತ ದೌಡಾಯಿಸಿ ಚಿಕಿತ್ಸೆ ನೀಡುತ್ತದ್ದಾರೆ. ಗ್ರಾಮದಲ್ಲಿ ಪ್ರಸಾದ ತಿಂದವವರನ್ನು ವೈದ್ಯರ ತಂಡ ಪರೀಕ್ಷೆ ಮಾಡುತ್ತಿದೆ.
ಗ್ರಾಮದಲ್ಲಿ ಘಟನೆಯಿಂದಾಗಿ ಆತಂಕದ ವಾತಾವರಣ ಮೂಡಿದ್ದು, ಸುಳ್ವಾಡಿ ಕಿಚ್ಗುತ್ತಿ ಮಾರಮ್ಮನ ವಿಷ ಪ್ರಸಾದ ಪ್ರಕರಣ ಮಾಸುವ ಮುನ್ನವೇ ಸಕ್ಕರೆನಾಡಲ್ಲಿ ಅಂತಹದ್ದೇ ಪ್ರಕರಣ ನಡೆದಿದೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಯುತ್ತಿದೆ.