ಕಿಮ್ಸ್ ಗೆ 200 ಪೋರ್ಟಬಲ್ ವೆಂಟಿಲೇಟರ್ ಹಸ್ತಾಂತರ
1 min readಹುಬ್ಬಳ್ಳಿ: ಅಮೆರಿಕಾದ ಇಲಿನಾಯ್ಸ್ ವಿಶ್ವವಿದ್ಯಾಲಯ ರೂಪಿಸಿದ ಜೀವ ರಕ್ಷಕ ಸಾಧನದ ಮಾದರಿ ಆಧರಿಸಿ, ಏಕಸ್ ಸಂಸ್ಥೆ ತಯಾರಿಸಿದ 200 ಪೋರ್ಟಬಲ್ ವೆಂಟಿಲೇಟರ್ ಗಳನ್ನು ಕಿಮ್ಸ್ ಗೆ ಹಸ್ತಾಂತರಿಸಲಾಯಿತು. ಕಿಮ್ಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಏಕಸ್ ಸಂಸ್ಥೆಯ ಡಾ.ಪ್ರವೀಣ್ ಕುಮಾರ್ ನಾಯ್ಕ್, ಕೇಂದ್ರದ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಜೀವರಕ್ಷಕ ಸಾಧನಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಭಾರತ ಕೋವಿಡ್ ಸಂದರ್ಭದಲ್ಲಿ ಎದುರಾದ ಎಲ್ಲಾ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡಿದೆ. ಆರಭಂದಲ್ಲಿ ದೇಶದಲ್ಲಿ ಒಂದು ಕೋವಿಡ್ ಲ್ಯಾಬ್ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ 2000 ಲ್ಯಾಬ್ ಗಳಲ್ಲಿ ದಿನವೊಂದಕ್ಕೆ ಒಂದು ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪಿ.ಪಿ.ಕಿಟ್ ಹಾಗೂ ವೆಂಟಿಲೇಟರ್, ಅಗತ್ಯ ಔಷಧಗಳನ್ನು ಹೊರದೇಶಕ್ಕೆ ರಫ್ತು ಮಾಡುವ ಹಂತಕ್ಕೆ ಬಂದಿದ್ದೇವೆ. ಪ್ರಧಾನ ಮಂತ್ರಿ ಆಶಯದಂತೆ ಆತ್ಮನಿರ್ಭರ ಭಾರತ ನಿರ್ಮಾಣ ಮಾಡಲಾಗುವುದು. ಕೋವಿಡ್ ಸಂದರ್ಭದಲ್ಲಿ ಕಾರ್ಪೋರೇಟ್ ಕಂಪನಿಗಳು ಸಾರ್ವಜನಿಕ ಹೊಣೆಗಾರಿಕೆ ನಿಧಿಯಡಿ ಸಾಕಷ್ಟು ಸಹಾಯವನ್ನು ನೀಡಿವೆ. ಕೋಲ್ ಇಂಡಿಯಾ 5 ಕೋಟಿ ರೂಪಾಯಿ, ಐಓಸಿಎಲ್ 50 ಲಕ್ಷ ರುಪಾಯಿಗಳ ಧನ ಸಹಾಯ ನೀಡಿವೆ. ಏಕಸ್ ಸಂಸ್ಥೆ ಈ ಮೊದಲು 4 ವೆಂಟಿಲೇಟರ್ ಗಳನ್ನು ಕಿಮ್ಸ್ ಗೆ ನೀಡಿತ್ತು. ಈ ಸ್ವತಃ ನಿರ್ಮಿಸಿದ 200 ಪೋರ್ಟಬಲ್ ವೆಂಟಿಲೆಟರ್ ಉಚಿತವಾಗಿ ನೀಡಿದೆ. ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಕೇಂದ್ರ ಸರ್ಕಾರ ಅಕ್ಷರ ಸಹ ಜಾರಿಗೊಳಿಸಲು ನಿರ್ಧರಿಸಿದೆ. ಇದರ ಅಂಗವಾಗಿ ಯಾವುದೇ ಭಾರತೀಯ ಕಂಪನಿಗಳು 200 ಕೋಟಿ ಮೊತ್ತದ ಒಳಗಿನ ನಿರ್ಮಾಣ ಗುತ್ತಿಗೆಯನ್ನು ಸ್ಥಳೀಯ ದೇಶಿಯ ಕಂಪನಿಗಳಿಗೆ ನೀಡಬೇಕು. ಹೊರ ದೇಶದ ಕಂಪನಿಗಳಿಗೆ ನೀಡುವ ಹಾಗಿಲ್ಲ ಎಂಬ ಆದೇಶನ್ನು ಕೇಂದ್ರ ಸರ್ಕಾರದಿಂದ ಹೊರಡಿಸಲಾಗುತ್ತಿದೆ. ಯಾವುದೇ ಹೊರದೇಶದ ಕಂಪನಿ ದೇಶದಲ್ಲಿ ಹೂಡಿಕೆ ಮಾಡುವ ಮೊದಲು ಗೃಹ ಮಂತ್ರಾಲಯದ ಪರವಾನಿಗೆ ಪಡೆಯ ಬೇಕು ಎಂಬ ನಿಯಮವನ್ನು ವಿಧಿಸಲಾಗುತ್ತದೆ. ದೇಶದ ಆರೋಗ್ಯ ಸೌಕರ್ಯಗಳನ್ನು ದೃಷ್ಟಿಯಿಂದ ಪ್ರತಿ ಮೂರು ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತಿದೆ. ದೇಶದ ಆರ್ಥಿಕತೆ ಚೇತರಿಕೆ ಹಾದಿಗೆ ಮರಳಿದೆ ಎಂದು ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್, ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ಹೆಸರಿನಲ್ಲಿ ಲೂಟಿ ಕಾರ್ಯ ಮಾಡುತ್ತಿವೆ. ಕೊರೋನಾ ಪ್ಯಾಕೇಜ್ ಹೆಸರಿನಲ್ಲಿ 5 ರಿಂದ 10 ಲಕ್ಷ ಶುಲ್ಕ ವಿಧಿಸುತ್ತಿವೆ. ಇದು ಸರಿಯಾದ ಮಾರ್ಗವಲ್ಲ. ಮಧ್ಯಮ ವರ್ಗದ ಜನರಿಗೆ ಇದು ಹೊರೆಯಾಗುತ್ತದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಜೀವದ ಹಂಗು ತೊರೆದು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಕಿಮ್ಸ್ ವೈದ್ಯರು ಕೋವಿಡ್ ಸಂದರ್ಭದಲ್ಲಿ ನಿರ್ವಹಿಸಿದ ಕಾರ್ಯ ಶ್ಲಾಘನೀಯವಾಗಿದೆ. ಏಕಸ್ ಸಂಸ್ಥೆಯು ಸಾಮಾಜಿಕ ಬದ್ದತೆಯಿಂದ ಜೀವರಕ್ಷಕ ಸಾಧನಗಳನ್ನು ತಯಾರಿಸಿ ಉಚಿತವಾಗಿ ನೀಡುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯಮೆಗಳನ್ನು ಸ್ಥಾಪಿಸಲು ಉತ್ಸುಕವಾಗಿರುವ ಏಕಸ್ ಸಂಸ್ಥೆಗೆ ರಾಜ್ಯ ಸರ್ಕಾರದಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಏಕಸ್ ಸಂಸ್ಥೆಯ ಡಾ.ಪ್ರವೀಣ್ ಕುಮಾರ್ ನಾಯ್ಕ್ ಮಾತನಾಡಿ ಸದ್ಯ 200 ಜೀವರಕ್ಷಕ ಪೋರ್ಟಬಲ್ ವೆಂಟಿಲೇಟರ್ ಗಳನ್ನು ನೀಡಲಾಗಿದೆ. ಕಿಮ್ಸ್ ನಿಂದ ಇನ್ನೂ ಹೆಚ್ಚಿನ ಬೇಡಿಕೆ ಬಂದರೆ ಅವುಗಳನ್ನು ಪೂರೈಸಲಾಗುವುದು. ರೋಟರಿ ಮತ್ತು ಇತರೆ ಸಂಘ ಸಂಸ್ಥೆ ಜೊತೆಗೂಡಿ ಇತರೆ ಜಿಲ್ಲೆಗಳಲ್ಲೂ ವೆಂಟಿಲೇಟರ್ ಹಂಚಿಕೆ ಮಾಡಲಾಗುವುದು ಎಂದರು. ಹುಡಾ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ, ಏಕಸ್ ಸಂಸ್ಥೆಯ ಸುಗಂಧಿ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಮುಲ್ಕಿ ಪಾಟೀಲ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.