ಚುನಾವಣಾ ಅಧಿಕಾರಿಗೆ ಗ್ರಾಮೀಣ ಶಿಕ್ಷಕ ಸಂಘ ಮಾಡಿಕೊಂಡ ಮನವಿ ಏನು ಗೊತ್ತಾ..
1 min readಧಾರವಾಡ: ಚುನಾವಣೆ ಕರ್ತವ್ಯಕ್ಕೆ ಹಾಜರಾಗುವ ಶಿಕ್ಷಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಕರ್ನಾಟಕ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡರು.
ಸಹಾಯಕ ಚುನಾವಣಾಧಿಕಾರಿ ಲಕ್ಷೇಶ್ವರ ಅವರನ್ನು ಭೇಟಿ ಮಾಡಿದ ಸಂಘವೂ, ರಾಜ್ಯದ ಸಾರ್ವತ್ರಿಕ ಚುನಾವಣೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಗ್ರಾಮೀಣ ಪ್ರದೇಶದ ಶಿಕ್ಷಕ ಶಿಕ್ಷಕಿಯರಿಗೆ ಚುನಾವಣಾ ಕರ್ತವ್ಯದ ಮುನ್ನಾ ದಿನ ಶಾಲೆಗೆ ಹೋಗಿ ಬಂದು ಕರ್ತವ್ಯಕ್ಕೆ ತಯಾರಾಗಲು ಮತ್ತು ಚುನಾವಣಾ ದಿನ ಕರ್ತವ್ಯ ಮುಗಿಸಿ ಮರಳಿ ಕೇಂದ್ರ ಸ್ಥಾನ ತಲುಪಿ ಶಾಲೆಗೆ ಹಾಜರಾಗಲು ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ತಾಲೂಕ ಕೇಂದ್ರದಿಂದ ಗ್ರಾಮೀಣ ಪ್ರದೇಶಗಳು ದೂರವಿರುವುದರಿಂದ ಹಾಗೂ ಸಾರಿಗೆ ಸೌಕರ್ಯವಿಲ್ಲದೆ ಅಪರಾತ್ರಿಯಲ್ಲಿ ತಲುಪುವಂತಾಗಿದೆ. ಹೀಗಾಗಿ ಮುಖ್ಯ ಚುನಾವಣಾಧಿಕಾರಿಗಳು ಕರ್ತವ್ಯದಲ್ಲಿರುವ ಗ್ರಾಮೀಣ ಪ್ರದೇಶದ ಚುನಾವಣಾ ಸಿಬ್ಬಂದಿಗಳಿಗೆ ಮೊದಲ ದಿನ ಹಾಗೂ ಮತದಾನದ ಮಾರನೇ ದಿನ ಅನ್ಯ ಕಾರ್ಯ ನಿಮಿತ್ತ ರಜೆ ನೀಡುವಂತೆ ಆದೇಶಿಸಬೇಕೆಂದು ಮನವಿ ಮಾಡಿಕೊಂಡರು. ಮನವಿಗೆ ಚುನಾವಣಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರುಗಳಾದ ಎಂ.ಐ.ಮುನವಳ್ಳಿ ಹಾಗೂ ಟಿ.ಸೊಣ್ಣಪ್ಪ, ರಾಜ್ಯ ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ, ಬೆಳಗಾವಿ ಜಿಲ್ಲಾಧ್ಯಕ್ಷ ಶ್ರೀಧರ ಗಣಾಚಾರಿ ನಿಯೋಗದಲ್ಲಿದ್ದರು.