ಆರು ಸಾವಿರ ಲಂಚ ಪಡೆದ ಇಇ ಮನೆಯಲ್ಲಿ ಸಿಕ್ಕಿದ್ದು ಕಂತೆ ಕಂತೆ ಹಣ- ಚಿನ್ನಾಭರಣ

ಧಾರವಾಡ: ಸಿದ್ದಗೊಂಡಿದ್ದ ಕ್ಲಾಸ್ ಪೋರ್ತ ಗುತ್ತಿಗೆದಾರರ ಲೈಸನ್ಸ್ ನೀಡಲು ಆರು ಸಾವಿರ ರೂಪಾಯಿ ಕೇಳಿ ಸಿಕ್ಕಿಬಿದ್ದಿರುವ ಧಾರವಾಡ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರನ ಮನೆಯಲ್ಲೂ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಕಲಘಟಗಿ ತಾಲೂಕಿನ ಕಾಮಧೇನು ಗ್ರಾಮದ ಕಲ್ಲಪ್ಪ ಶಿರಬಡಗಿ ಹಾಗೂ ಚಂದ್ರಶೇಖರಯ್ಯ ಹಿರೇಮಠ ಆನ್ ಲೈನ್ ಮೂಲಕ ಲೈಸನ್ಸಗೆ ಹಣ ತುಂಬಿದ್ದರಿಂದ ಎಲ್ಲವೂ ಸಿದ್ಧವಾಗಿತ್ತು. ಆದರೆ, ಅದನ್ನ ಕೊಡಲು ಸ್ವತಃ ಎಕ್ಸಿಕ್ಯೂಟಿವ್ ಇಂಜಿನಿಯರ್ ಒಟ್ಟು 6 ಸಾವಿರ ಹಣ ಲಂಚ ಕೇಳಿದ್ದರು. ಅಷ್ಟೇ ಅಲ್ಲ, ಅದೇ ಕಾರಣಕ್ಕೆ ಪದೇ ಪದೇ ಕಚೇರಿಗೆ ಅಲೆದಾಡಿಸಿದ್ದರು. ಹೀಗಾಗಿ ಇಬ್ಬರು ಕೂಡಿಕೊಂಡು ಎಸಿಬಿಗೆ ದೂರು ನೀಡಿದ್ದರು.
ದೂರು ಪಡೆದ ತಕ್ಷಣವೇ ಜಾಗೃತರಾದ ಎಸಿಬಿ ತಂಡ ದೂರುದಾರರ ಸಮೇತ ಇಇ ಮನೋಹರ ಮಂಡೋಲಿಕರ ಮೇಲೆ ದಾಳಿ ಮಾಡಿ, ಹಣದ ಸಮೇತ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ನಂತರದ ನಡೆದ ವಿಚಾರಣೆಯಲ್ಲಿ ಬೆಚ್ಚಿ ಬಿದ್ದಿದ್ದಾರೆ.
ಮೊದಲಿಂದಲೂ ದೂರು ಬಂದ ಹಿನ್ನೆಲೆಯಲ್ಲಿ ಯಾಲಕ್ಕಿಶೆಟ್ಟರ ಕಾಲನಿಯ ಹುಕ್ಕೇರಿಕರ ನಗರದ ಮನೆಯಲ್ಲಿ ಶೋಧ ಕಾರ್ಯ ನಡೆಸಿದಾಗ 13ಲಕ್ಷ 80 ಸಾವಿರ ನಗದು ಹಣದ ಸಮೇತ ಲಕ್ಷಾಂತರ ಮೌಲ್ಯದ ಬಂಗಾರ, ಬೆಳ್ಳಿ ಪತ್ತೆಯಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
ಎಸಿಬಿ ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಮಂಜುನಾಥ ಹಿರೇಮಠ ತಂಡ ದಾಳಿಯನ್ನ ನಡೆಸಿ, ಭ್ರಷ್ಟಾಚಾರವನ್ನ ಬಯಲಿಗೆ ಎಳೆದಿದೆ.