ಎಂಟು ಪೊಲೀಸರ ನೌಕರಿ ಕಳೆದು ನಾಪತ್ತೆಯಾಗಿದ್ದ- ರೇಪ್ ಆರೋಪಿ ಬಂಧನ

ಹುಬ್ಬಳ್ಳಿ: ಅತ್ಯಾಚಾರವೊಂದರಲ್ಲಿ ಸಿಲುಕಿಕೊಂಡು ಜೈಲು ಪಾಲಾಗಿದ್ದ ವ್ಯಕ್ತಿಯೋರ್ವ ಪದೇ ಪದೇ ತಪ್ಪಿಸಿಕೊಂಡು, ಕಾವಲಿಗಿದ್ದ ಪೊಲೀಸರ ನೌಕರಿ ಕಳೆಯುತ್ತಿದ್ದ ವ್ಯಕ್ತಿಯನ್ನೂ ಕಡೆಗೂ ಬಂಧಿಸುವಲ್ಲಿ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಕಾಣಿಸಿಕೊಳ್ಳುತ್ತಿದ್ದ ಬಸವರಾಜ ಕುರಡಗಿಮಠ ಎಂಬ ವ್ಯಕ್ತಿಯೇ ಮೈಸೂರಿನಲ್ಲಿ ಬಂಧನವಾಗಿದ್ದಾನೆ. ಈತನಿಂದ ಒಟ್ಟು ಎಂಟು ಜನ ಪೊಲೀಸರು ನೌಕರಿಯನ್ನ ಕಳೆದುಕೊಂಡಿದ್ದಾರೆ.
48 ವರ್ಷದ ಈತ 2014ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಅಲ್ಲಿಂದ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಪರಾರಿಯಾಗಿದ್ದ. ಆಗ ನಾಲ್ವರು ಪೊಲೀಸರು ಅಮಾನತ್ತುಗೊಂಡಿದ್ದರು. ನಂತರ ಮತ್ತೆ ಬಂಧನವಾಗಿತ್ತು.
ಈ ಘಟನೆಯ ನಂತರ ಮತ್ತೆ ಜೈಲಿನಲ್ಲಿದ್ದ ಬಸವರಾಜ ಕುರಡಗಿಮಠ, ಅನಾರೋಗ್ಯದ ನೆಪದಲ್ಲಿ ಬೆಂಗಳೂರಿಯ ಜಯದೇವ ಆಸ್ಪತ್ರೆಗೆ ದಾಖಲಾಗಿ, ಅಲ್ಲಿಂದಲೂ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆಗಲೂ ನಾಲ್ಕು ಪೊಲೀಸರು ಅಮಾನತ್ತುಗೊಂಡಿದ್ದರು.
ಅಂದಿನಿಂದ ತಲೆಮರೆಸಿಕೊಂಡಿದ್ದ ಬಸವರಾಜನನ್ನ ಹುಡುಕುತ್ತಿದ್ದ ಪೊಲೀಸರಿಗೆ ಕಳೆದ ಒಂದು ವರ್ಷದಿಂದಲೂ ಚಳ್ಳೆಹಣ್ಣು ತಿನಿಸುತ್ತಿದ್ದ. ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಸುರೇಶ ಕುಂಬಾರ ತಂಡ, ಮಂಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ಹಲವೆಡೆ ಹುಡುಕಾಡಿ, ಕೊನೆಗೆ ಮೈಸೂರಿನಲ್ಲಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.