ನಂಗೇನಾದರೂ ಆಯಿತಂದ್ರೇ ಜಿಲ್ಲಾಡಳಿತವೇ ಹೊಣೆ: ಜೆಡಿಎಸ್ ಶಾಸಕರ ಜೀವಕ್ಕೆ ಅಪಾಯ
1 min readವಿಜಯಪುರ: ನನಗೆ ಹಾಗೂ ನನ್ನ ಕುಟುಂಬಕ್ಕೆ ಏನಾದರೂ ಹೆಚ್ಚು ಕಡಿಮೆ ಆದರೆ, ಅದಕ್ಕೆ ನೇರ ಹೊಣೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸರ್ಕಾರವೇ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಶ್ರೀಗಂಧ ಗಿಡದ ಕಳ್ಳತನ ನೆಪದಲ್ಲಿ ನಮ್ಮ ಮನೆ ಆವರಣಕ್ಕೆ ಮಧ್ಯೆ ರಾತ್ರಿ ನುಗ್ಗಿ ನಾವು ಮಹಾದೇವ ಸಾಹುಕಾರ್ ಕಡೆಯವರು ಎಂದು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಆದರ್ಶನಗರ ಠಾಣೆಗೆ ತಿಳಿಸುತ್ತಿದ್ದಂತೆ ದುಷ್ಕರ್ಮಿಗಳು ಪಲಾಯನ ಮಾಡಿದ್ದಾರೆ ಎಂದರು.
ಕೆಲ ದಿನಗಳ ಹಿಂದೆ ನಮ್ಮ ಆಪ್ತರ ಬಳಿ ನನ್ನ ಕುರಿತು ಮಾಹಿತಿ ಪಡೆದುಕೊಂಡು, ಜೀವ ಬೆದರಿಕೆ ಹಾಕಿದ್ದಾರೆ. ಇದನ್ನೆಲ್ಲ ಗಮನಿಸಿದರೆ, ನನ್ನ ಮುಗಿಸಲು ದುಷ್ಕರ್ಮಿಗಳು ಸಂಚು ರೂಪಿಸುತ್ತಿದ್ದಾರೆ ಎನ್ನುವುದು ತಿಳಿದು ಬರುತ್ತಿದೆ. ಈ ಬೆದರಿಕೆ ಹಿಂದೆ ಯಾರು ಯಾರೂ ಇದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ನಾನು ಶಾಸಕನಾದ ಬಳಿಕ ಈ ಬಾಗದಲ್ಲಿ ನಡೆಯುತ್ತಿದ್ದ ನಡೆಯುತ್ತಿದ್ದ ಮರಳು ಮಾಫಿಯಾ, ಗಾಂಜಾ, ಗುಟಕಾ, ಮಾವಾಗಳನ್ನು ಬಂದ್ ಮಾಡಿಸಿದ್ದೆ. ನಂತರ ದಿನಗಳಲ್ಲಿ ಬಿಜೆಪಿ ಸರ್ಕಾರ ಬಂದ್ಮೇಲೆ ಈ ಅಕ್ರಮ ದಂಧೆಗಳು ಮತ್ತೆ ಆರಂಭಗೊಂಡಿರುವುದನ್ನು ವಿರೋಧಿಸಿದ್ದಕ್ಕೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ತಿಳಿಸಿದರು.
ಇನ್ನು ಈ ಕುರಿತು ಲಿಖಿತ ರೂಪದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುತ್ತಿದ್ದು, ನನ್ನ ಹಾಗೂ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕೋರುತ್ತೇನೆ ಎಂದು ದೇವಾನಂದ ಚವ್ಹಾಣ್ ಹೇಳಿದರು.