ರಸ್ತೆ ಅಪಘಾತ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ದುರ್ಮರಣ
ಉತ್ತರಕನ್ನಡ: ಕೆಲವು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಕಾರು ಮತ್ತು ಸ್ಕೂಟಿಯ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಘಟನೆ ಸಂಭವಿಸಿದೆ.
ಮೃತ ಮಹಿಳಾ ಗ್ರಾಮ ಲೆಕ್ಕಾಧಿಕಾರಿಯನ್ನ ಉಷಾ ಎಂದು ಗುರುತಿಸಲಾಗಿದ್ದು, ಸ್ಕೂಟಿಯಲ್ಲಿ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಸ್ಕೂಟಿ ಚಲಾಯಿಸುವಾಗ ಹೆಲ್ಮೇಟ್ ಇಲ್ಲದೇ ಇರುವುದೇ ದುರಂತಕ್ಕೆ ಕಾರಣವಾಗಿದೆ.
ಸಾಗರದಲ್ಲಿಯೇ ವಾಸ ಮಾಡುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಉಷಾ, ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಸಿದ್ಧಾಪುರ ತಹಶೀಲ್ದಾರ ಕಚೇರಿಗೆ ಬರುತ್ತಿದ್ದರು. ಅದೇ ಸಮಯದಲ್ಲಿ ಎದುರಿಗೆ ಬಂದ ಮಾರುತಿ ಡಿಸೈಯರ್ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸ್ಕೂಟಿ ಚಲಾಯಿಸುತ್ತಿದ್ದ ಉಷಾ ಅವರ ತಲೆ ನೇರವಾಗಿ ರಸ್ತೆಗೆ ಬಿದ್ದಿದ್ದು, ಅದೇ ಗಾಯದಿಂದ ಸಾವಿಗೀಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಸಿದ್ಧಾಪುರ ಠಾಣೆಯ ಪೊಲೀಸರು ಆಗಮಿಸಿದ್ದು, ಕಾರಿನಲ್ಲಿದ್ದವರನ್ನ ವಶಕ್ಕೆ ಪಡೆದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.