ಜೊತೆ ಜೊತೆಯಲ್ಲಿ…- ಇದ್ದಾಗಲೂ ಇಲ್ಲವಾದಾಗಲೂ..!
1 min readಧಾರವಾಡ: ತನ್ನೊಂದಿಗೆ ಸುಮಾರು 40ಕ್ಕೂ ಹೆಚ್ಚು ವರ್ಷ ಬಾಳಿದಾಕೆ ಬೆಳ್ಳಂಬೆಳಿಗ್ಗೆ ಹೃದಯಾಘಾತದಿಂದ ತೀರಿ ಹೋದಾಗ ಆತ ಯಾರೊಂದಿಗೂ ಕಣ್ಣೀರು ಹಾಕದೇ ಮುಂದಿನ ವ್ಯವಸ್ಥೆ ಮಾಡಿ ಎಂದು ಒಂದೇಡೆ ಹೋಗಿ ಕುಳಿತಿದ್ದ. ಆದರೆ, ಹಾಗೇ ಕೂತವನು ಆತನು ಮರಳಿ ಬಾರದ ಲೋಕಕ್ಕೆ ಹೋಗುತ್ತಾರೆಂದು ಯಾರೂ ಅಂದುಕೊಂಡಿರಲಿಲ್ಲ. ಹಿರಿಯ ವಯಸ್ಸಿನ ಮಹಿಳೆಯ ಶವ ಸಂಸ್ಕಾರದ ಬಗ್ಗೆ ರೆಡಿ ಮಾಡುತ್ತಿದ್ದವರಿಗೆ ಮತ್ತೊಂದು ಆಘಾತ ಕಾದಿತ್ತು. ಮಡದಿಯ ಸಾವಿನಿಂದ ನೊಂದ ಪತಿ ಕೂಡಾ ಮರಣ ಹೊಂದಿದ್ದಾರೆ. ಇಂತಹ ಘಟನೆಯೊಂದು ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರದ ನಾಗರಳ್ಳಿ ಗ್ರಾಮದಲ್ಲಿ ನಡೆದಿದೆ.
ನೀಲವ್ವ ಚನ್ನಬಸನಗೌಡ ದ್ಯಾಮನಗೌಡ್ರ ಬೆಳಿಗ್ಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದರಿಂದ ನೊಂದ ಪತಿ ಚನ್ನಬಸನಗೌಡ ದ್ಯಾಮನಗೌಡ್ರ ಕೆಲವೇ ಗಂಟೆಗಳ ಅಂತರದಲ್ಲಿ ಸಾವಿಗೀಡಾಗಿದ್ದಾರೆ. ಇಂತಹ ಘಟನೆಯಿಂದ ನಾಗರಳ್ಳಿ ಗ್ರಾಮಸ್ಥರು ಕೂಡಾ ಕಣ್ಣೀರಾಗಿದ್ದಾರೆ. ಪತ್ನಿಯ ಶವದ ಪಕ್ಕದಲ್ಲೇ ಪತಿಯನ್ನ ಕೂಡಿಸಿ, ಇಬ್ಬರನ್ನೂ ಒಂದೇ ಜಾಗದಲ್ಲಿ ಶವ ಸಂಸ್ಕಾರ ಮಾಡುವ ಮೂಲಕ ಮತ್ತಷ್ಟು, ಅವರಲ್ಲಿನ ಆತ್ಮೀಯತೆಯನ್ನ ಹಾಗೇಯೇ ಉಳಿಸಿದ್ದಾರೆ.
ದಂಪತಿಗಳು ಶರಣಪ್ಪಗೌಡ, ನಾಗನಗೌಡ, ಬಸವ್ವ ಮತ್ತು ರತ್ನವ್ವ ಎಂಬ ನಾಲ್ಕು ಮಕ್ಕಳನ್ನ ಅಗಲಿದ್ದು, ಅಪಾರ ಬಂಧು ಬಳಗದ ಉಪಸ್ಥಿತಿಯಲ್ಲಿ ಶವ ಸಂಸ್ಕಾರ ನಡೆದಿದೆ. ದಂಪತಿಗಳ ಸಂಬಂಧ ಹೇಗೆ ಇರಬೇಕು ಎನ್ನುವ ಹಾಗೇ, ಇವರಿಬ್ಬರೂ ಇನ್ನಿಲ್ಲವಾಗಿದ್ದು, ಇಬ್ಬರು ಹಿರಿಯರ ಅಗಲಿಕೆ ಗ್ರಾಮದ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ಬರಿಸಿತ್ತು.