ಹೆಬಸೂರ ಬಳಿ ಭೀಕರ ರಸ್ತೆ ಅಪಘಾತ: ಆಪ್ತಮಿತ್ರರಿಬ್ಬರೂ ಬಾರದ ಲೋಕಕ್ಕೆ

ಹುಬ್ಬಳ್ಳಿ: ತಾಲೂಕಿನ ಹೆಬಸೂರ ಗ್ರಾಮದ ಸರಕಾರಿ ಕಾಲೇಜು ಬಳಿ ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ತಡರಾತ್ರಿ ಸಂಭವಿಸಿದೆ.
ನವಲಗುಂದ ತಾಲೂಕಿನ ಕಾಲವಾಡ ಗ್ರಾಮದ ಬಸವರಾಜ ತಳವಾರ ಹಾಗೂ ಹನಮಂತ ಚಿಕ್ಕನರ್ತಿ ಎಂಬುವವರೇ ಸಾವಿಗೀಡಾದ ದುರ್ಧೈವಿಗಳಾಗಿದ್ದು, ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.
ದ್ವಿಚಕ್ರ ವಾಹನಕ್ಕೆ ವೇಗವಾಗಿ ಹೋಗುತ್ತಿದ್ದ ವಾಹನ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ತಲೆಗಳು ರಸ್ತೆಗೆ ಬಡಿದು ತೀವ್ರವಾಗಿ ರಕ್ತ ಸೋರಿಕೆಯಾಗಿತ್ತು. ಅಷ್ಟೇ ಅಲ್ಲ, ತಡರಾತ್ರಿಯಾಗಿದ್ದರಿಂದ ಈ ರಸ್ತೆಯ ಮೂಲಕ ಸಂಚಾರ ನಡೆಸುವವರು ಕಡಿಮೆ. ಹಾಗಾಗಿಯೇ, ಅಪಘಾತ ನಡೆದ ಕೆಲ ಸಮಯದ ನಂತರ ದಾರಿಹೋಕರು, ಪೊಲೀಸರಿಗೆ ಮಾಹಿತಿ ನೀಡಿದ್ರು.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಿಮ್ಸಗೆ ರವಾನೆ ಮಾಡುವ ಪ್ರಯತ್ನ ಮಾಡಿದರಾದರೂ, ಕಿಮ್ಸಗೆ ತೆರಳುವ ಮುನ್ನವೇ ಇಬ್ಬರು ಪ್ರಾಣಬಿಟ್ಟಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರು, ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನದ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದು, ಗೆಳೆಯರಿಬ್ಬರು ಇನ್ನಿಲ್ಲವಾಗಿದ್ದಾರೆ.