ಒಂದು ವರ್ಷದಿಂದ ಶಿಕ್ಷಕ ಕೋಮಾದಲ್ಲಿ: ಮನೆಗೆ ಹೋದ ಶಿಕ್ಷಣ ಸಚಿವ ಸುರೇಶಕುಮಾರ

ಮೈಸೂರು: ಕಳೆದ ಒಂದು ವರ್ಷದ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸರಕಾರಿ ಶಾಲೆ ಶಿಕ್ಷಕರೋರ್ವರು ಕೋಮಾದಲ್ಲಿದ್ದು, ಕುಟುಂಬವೂ ಸಂಕಷ್ಟದಲ್ಲಿ ಸಿಲುಕಿದೆ. ಈ ವಿಷಯವರಿತ ಶಿಕ್ಷಣ ಸಚಿವರು ಶಿಕ್ಷಕರ ಮನೆಗೆ ಭೇಟಿ ನೀಡಿದ್ರು.
ಶಿಕ್ಷಕರನ್ನ ನೋಡಿದ ನಂತರ ಸಚಿವರು ಹೇಳಿದ್ದೇನು ಕೇಳಿ..
ನಂಜನಗೂಡು ತಾಲ್ಲೂಕಿನ ಭುಜಂಗಯ್ಯನ ಹುಂಡಿ ಸರ್ಕಾರಿ ಶಾಲೆಯ ಶಿಕ್ಷಕ ಮಹದೇವಸ್ವಾಮಿ, ಕಳೆದ ವರ್ಷ ಡಿಸೆಂಬರ್ ನಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದಾರೆ. ಘಟನೆ ನಡೆದು ವರ್ಷ ಕಳೆದರೂ ಕೋಮಾದಿಂದ ಹೊರಬಾರದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರ ಭೇಟಿಗೆ ಶಿಕ್ಷಕ ಮಹದೇವಸ್ವಾಮಿಯವರ ಪತ್ನಿ ಮಂಜುಳಾ ಮನವಿ ಮಾಡಿಕೊಂಡಿದ್ದರು.
ಮನವಿಯ ಮೇರೆಗೆ ಮನೆಗೆ ಆಗಮಿಸಿದ ಸಚಿವ ಸುರೇಶಕುಮಾರ, ಶಿಕ್ಷಣ ಇಲಾಖೆಯಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದರು. ಕೆಲಸಕ್ಕೆ ಹಾಜರಾಗದ ಕಾರಣ ನಿವೃತ್ತಿ ಪಡೆಯುವಂತೆ ಸಲಹೆ ನೀಡಿದರು.
ಇದುವರೆಗೂ ಸಿಗಬೇಕಾದ ಬಾಕಿ ಇರುವ ಎಲ್ಲಾ ಭತ್ಯೆಗಳ ಪಾವತಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಮಹದೇವಸ್ವಾಮಿ ಪತ್ನಿ ಮಂಜುಳಾಗೆ ವಿದ್ಯಾರ್ಹತೆಯ ಆಧಾರದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಅನುಕಂಪದ ಹುದ್ದೆ ನೀಡುವ ಭರವಸೆ ನೀಡಿದರು. ಸಚಿವರಿಗೆ ಡಿಡಿಪಿಐ ಪಾಂಡುರಂಗ, ನಂಜನಗೂಡು ಬಿಇಓ ರಾಜು ಸಾಥ್ ನೀಡಿದ್ದರು.