ವಿನಾಯಕ ರೆಸಿಡೆನ್ಸಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
1 min readಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ವಿನಾಯಕ ರೆಸಿಡೆನ್ಸಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಬೇರೆಯದ್ದೇ ಕಾರಣವೆಂಬುದು ಗೊತ್ತಾಗಿದ್ದು, ಉಪನಗರ ಠಾಣೆ ಪೊಲೀಸರು ಮಹತ್ವದ ಮಾಹಿತಿಯನ್ನ ಕಲೆ ಹಾಕಿದ್ದಾರೆ.
ತಿರುಪತಿ ಮೂಲದ ಡಿ.ರಾಜೇಂದ್ರನಿಗೆ ಹಣಕ್ಕೆ ಪೀಡಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಗೊತ್ತಾಗಿದೆ. ಇದರ ಜೊತೆಗೆ ಬಿಟ್ ಕ್ವಾಯಿನ್ ಮಾದರಿಯ ಈಸ್ಟ್ ಮ್ಯಾನೇಜಮೆಂಟ್ ಪೇ ಕಾರ್ಡ್ ವ್ಯವಹಾರವೂ ಕಾರಣ ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಾಜೇಂದ್ರ, ಅಮರಗೋಳದ ಶಿವಪ್ಪ ಗಣಪ್ಪನವರ, ಗೋವಾದ ಪ್ರವೀಣ, ಬೆಂಗಳೂರಿನ ರಾಜೇಶ ಹಾಗೂ ಹರಿನಾಯಾಯಣ ಕಾರಣವೆಂದು ಡೆತ್ ನೋಟ್ ಬರೆದಿಟ್ಟಿದ್ದಾನೆ. ಇದನ್ನ ಆಧರಿಸಿ ಪೊಲೀಸರು ಶಿವಪ್ಪ ಗಣಪ್ಪನವರ ವಿಚಾರಣೆಗೆ ಒಳಪಡಿಸಿದ್ದಾರೆ.
ಡಿಸೆಂಬರ್ 11ರಂದು ಹುಬ್ಬಳ್ಳಿಗೆ ಬಂದಿದ್ದ ರಾಜೇಂದ್ರ, ಬೆಂಗಳೂರು ಮೂಲದ ರಾಜೇಶ ಮೂಲಕ ಶಿವಪ್ಪ ಗಣಪ್ಪನವರ ಎಂಬಾತನನ್ನು ಭೇಟಿ ಮಾಡಿದ್ದಾನೆ. ಈಸ್ಟ್ ಮ್ಯಾನೇಜಮೆಂಟ್ ಪೇ ಕಾರ್ಡ್ ಬಗ್ಗೆ ತಿಳಿಸಿ, ಕಾರ್ಡನ್ನು ಒಬ್ಬರಿಂದ ಮತ್ತೋಬ್ಬರಿಗೆ ಹೆಚ್ಚು ಹಣಕ್ಕೆ ಮಾರಾಟ ಮಾಡಲಾಗುತ್ತದೆ. ಇದೇ ಆಗದೇ ಇದ್ದಾಗಲೇ ರಾಜೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಗೊತ್ತಾಗಿದೆ.