26 ದಿನ-426 ಲೀಟರ್ ಮದ್ಯ-9 ವಾಹನ-58 ಪ್ರಕರಣ: ಗ್ರಾ.ಪಂ ಚುನಾವಣೆ ಎಫೆಕ್ಟ್
ಧಾರವಾಡ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಬಕಾರಿ ಹಾಗೂ ಜಾಗೃತದಳ ಸೇರಿಕೊಂಡು ನವೆಂಬರ್ 30ರಿಂದ ಡಿಸೆಂಬರ್ 26ರವರೆಗೆ ನಡೆಸಿದ ದಾಳಿಯಲ್ಲಿ 5.85 ಲಕ್ಷ ಮೌಲ್ಯದ ಮದ್ಯ ಹಾಗೂ ವಾಹನವನ್ನ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದ್ದಾರೆ.
ಅಬಕಾರಿ ಕಾಯ್ದೆ 1956ರಡಿ ಇಲ್ಲಿವರೆಗೆ ಒಟ್ಟು 58 ಪ್ರಕರಣಗಳನ್ನ ಅಬಕಾರಿ ಇಲಾಖೆಯಿಂದ ದಾಖಲಿಸಿ, ತನಿಖೆಯನ್ನ ಕೈಗೊಳ್ಳಲಾಗುತ್ತಿದೆ. ಅಕ್ರಮವಾಗಿ ಮದ್ಯ ದಾಸ್ತಾನು ಹಾಗೂ ಅನುಮತಿ ಪಡೆಯದೇ ಮದ್ಯ ಸೇವನೆಗೆ ಅವಕಾಶ ನೀಡಿದ ಧಾರವಾಡ ತಾಲೂಕಿನ ನಿಗದಿ ಗ್ರಾಮದ ದುರ್ಗಾ ಮಾಂಸಾಹಾರಿ ಖಾನಾವಳಿ, ಮುಗದ ಗ್ರಾಮದ ಕಿರಾಣಿ ಅಂಗಡಿ, ಯಾದವಾಡ ಗ್ರಾಮದ ಯಲ್ಲಪ್ಪ ಕಣಜನವರ, ಲಕಮಾಪುರ ಗ್ರಾಮ ಮಹಾಬಳೇಶ್ವರ ಮುದಕಣ್ಣನವರ ಕಿರಾಣಿ ಅಂಗಡಿ, ಧಾರವಾಡ ನಗರದ ಜೈ ಸಂತೋಷಿ ಮಾ ಮತ್ತು ಕಂಪನಿ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಗ್ಯಾನಬಾ ಬಾರ್ ಮತ್ತು ರೆಸ್ಟೋರೆಂಟ್, ಹುಬ್ಬಳ್ಳಿ ಶಹರದ ಸಂತೋಷ ಕಲಾಲ ಸಿಎಲ್-2 ಸೇರಿದಂತೆ ಒಟ್ಟು 58 ಪ್ರಕರಣಗಳು ದಾಖಲಾಗಿವೆ.
ದಾಳಿಯಲ್ಲಿ ಇಲ್ಲಿಯವರೆಗೆ 426 ಲೀಟರ್ ಅಕ್ರಮ ಮದ್ಯ, 7 ದ್ವಿಚಕ್ರವಾಹನ, 1 ಟಾಟಾ ಏಸ್, 1 ಆಟೋ ಜಪ್ತಿ ಮಾಡಲಾಗಿದೆ. ದಾಳಿಯಲ್ಲಿ ವಶಪಡಿಸಿಕೊಂಡ ಅಬಕಾರಿ ವಸ್ತುಗಳ ಮೌಲ್ಯ 170500 ರೂಪಾಯಿ, ವಾಹನಗಳ ಮೌಲ್ಯ 5.85ದ್ದಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.