ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದ ಧಾರವಾಡದ ಇರಾನಿ ಗ್ಯಾಂಗ್ ಅಂದರ್: ಬರೋಬ್ಬರಿ 1ಕೆಜಿ 20 ಗ್ರಾಂ ಬಂಗಾರ ವಶ

ಬೆಂಗಳೂರು: ನಗರದಲ್ಲಿ ಸರ ಕಳವು ಮಾಡಿ ಕದ್ದ ಸರಗಳನ್ನ ಧಾರವಾಡಕ್ಕೆ ತೆರಳಿ ಮಾರಾಟ ಮಾಡುತ್ತಿದ್ದ ಇರಾನಿ ತಂಡದ ಮೂವರು ಕಳ್ಳರನ್ನು ವಿಜಯನಗರ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಇರಾನಿ ತಂಡದ ಸದಸ್ಯ ಸಲೀಂ ಇರಾನಿ, ಆತನ ಸಹಚರರಾದ ಆಜಾದ, ಅವ್ನೋ ಬಂಧಿತರು. ಆರೋಪಿಗಳಿಂದ ನಗರದ 18 ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ 27 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, 50 ಲಕ್ಷ ರೂಪಾಯಿ ಮೌಲ್ಯದ 1ಕೆಜಿ 20 ಗ್ರಾಂ ಚಿನ್ನದ ಸರಗಳನ್ನ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪೈಕಿ ಸಲೀಂ ಇರಾನಿ ವಿರುದ್ಧ ಆಂದ್ರಪ್ರದೇಶದ ಗುಂಟೂರು ಮತ್ತು ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಉಪವಿಭಾಗದ ಎಸಿಪಿ ಕೆ.ನಂಜುಡೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇರಾನಿ ತಂಡದ ಸದಸ್ಯರನ್ನು ಸೆರೆ ಹಿಡಿದ ಪೊಲೀಸರ ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ ಪಂಥ ಶ್ಲಾಘನೆ ವ್ಯಕ್ತಪಡಿಸಿ, 50 ಸಾವಿರ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಮಹಿಳೆಯರ ಮೂಲಕ ಕದ್ದ ಚಿನ್ನ ಮಾರಾಟ: ಸರ ಕಳವು ಪ್ರಕರಣ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ಮಾಗಡಿ ರಸ್ತೆ ಠಾಣೆಯ ಸಬ್ ಇನ್ಸಪೆಕ್ಟರ್ ಸಂತೋಷ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಆರೋಪಿ ‘ಅವ್ನೂ’ ಕಳವು ಮಾಡಿದ ಸರಗಳನ್ನ ತನ್ನ ತಾಯಿ ಬಾನು, ಸ್ಥಳೀಯ ನಿವಾಸಿಗಳಾದ ಫಾತೀಮಾ ಅತ್ತರ್, ಗುಲ್ಜಾರ ಬೇಗಂ ಮೂಲಕ ಚಿನ್ನದ ಅಂಗಡಿಗಳಿಗೆ ಮಾರಾಟ ಮಾಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.