ಸರಕಾರಿ ಕಚೇರಿಗಳಲ್ಲಿ ಡ್ರೇಸ್ ಕೋಡ್: ಇಂದಿನಿಂದ ಧಾರವಾಡ ಡಿಸಿ ಕಣ್ಗಾವಲು

ಧಾರವಾಡ: ಲಾಕ್ ಡೌನ್ ನಂತರ ಸರಕಾರಿ ಕಚೇರಿಗಳಲ್ಲಿಯ ಸಿಬ್ಬಂದಿಗಳು ಬೇಕಾಬಿಟ್ಟಿ ಉಡುಗೆ ತೊಡುವುದನ್ನ ರೂಢಿಸಿಕೊಂಡಿದ್ದನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಿದ್ದನ್ನ ನೀವೂ ಗಮನಿಸಿದ್ದೀರಿ. ಇದೀಗ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಿರುವ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಸಿಬ್ಬಂದಿಗಳ ಡ್ರೆಸ್ ಬಗ್ಗೆ ಕಣ್ಗಾವಲಿಡಲಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಾರ್ವಜನಿಕರ ಹಲವಾರು ಅಹವಾಲು ಹಾಗೂ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಸರ್ಕಾರಿ ಸಿಬ್ಬಂದಿಗಳಿಗೆ ಆದೇಶವನ್ನು ಹೊರಡಿಸಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕೆಂದು ಹಾಗೂ ಅವರ ಜವಾಬ್ದಾರಿಯನ್ನು ಅರಿತು ಕಾರ್ಯ ಮಾಡಬೇಕೆಂದು ಸೂಚಿಸಿದ್ದರು. ಆದರೆ, ಜಿಲ್ಲಾಧಿಕಾರಿಗಳ ಆದೇಶಕ್ಕೆ ಯಾರೂ ತಲೆಕೆಡೆಸಿಕೊಂಡಿದ್ದಿಲ್ಲ. ಹೀಗಾಗಿಯೇ ತಾವೇ ಫೀಲ್ಡಿಗಿಳಿಯಲು ಮುಂದಾಗಿದ್ದಾರೆ.
ಆದೇಶಕ್ಕೆ ಡೋಂಟ್ ಕೇರ್ ಅಂದವರಿಗೆ ಇದೇ ಶಾಸ್ತಿ: ಸಾರ್ವಜನಿಕರು ಅತೀ ಹೆಚ್ಚು ಭೇಟಿ ನೀಡುವಂತಹ ಸರಕಾರಿ ಕಚೇರಿಗಳಾದ ತಹಶೀಲ್ದಾರರ ಕಚೇರಿ, ಮಹಾನಗರ ಪಾಲಿಕೆ, ಸಬ್ ರಜಿಸ್ಟ್ರಾರ್ ಕಚೇರಿ, ಖಜಾನೆ, ತಾಲೂಕು ಪಂಚಾಯತ ಹಾಗೂ ಇತರ ಕಚೇರಿಗಳಲ್ಲಿ ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಗಳವರೆಗೆ ಎಲ್ಲರೂ ಎಗ್ಗಿಲ್ಲದೆ ಮಾಡರ್ನ್ ಉಡುಪಿನಲ್ಲಿ ಕಚೇರಿಗೆ ಬರುತ್ತಿದ್ದಾರೆ ಅಲ್ಲದೆ ಜಿಲ್ಲಾಧಿಕಾರಿಗಳ ಆದೇಶ ಡೋಂಟ್ ಕೇರ್ ಮಾಡಿದ್ದಾರೆ ಎಂದು ಕರ್ನಾಟಕವಾಯ್ಸ್.ಕಾಂ ಮಾಹಿತಿ ಹೊರ ಹಾಕಿತ್ತು.
ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಆದೇಶವನ್ನ ಉಲ್ಲಂಘನೆ ಮಾಡಿದವರ ಮೇಲೆ ಕಠಿಣ ಕ್ರಮವನ್ನ ಜರುಗಿಸಲು ಮುಂದಾಗಿದ್ದಾರೆ.