ಹುಬ್ಬಳ್ಳಿಯಲ್ಲಿ ಕಾರು ಡಿಕ್ಕಿ: ನರಳಿ ನರಳಿ ಪ್ರಾಣಬಿಟ್ಟ ಮೂಖಪ್ರಾಣಿ..!
ಹುಬ್ಬಳ್ಳಿ: ಮನೆಯಿಂದ ಮೇಯಲು ಬಂದಿದ್ದ ದನವೊಂದಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೆಲಕಾಲ ನರಳಿ ನರಳಿ, ದನವೊಂದು ಪ್ರಾಣ ಬಿಟ್ಟ ಘಟನೆ ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ಸಮೀಪ ನಡೆದಿದೆ.
ಬಿಡನಾಳ ಗ್ರಾಮದ ರೈತ ಮಹಾದೇವ ಅವರಿಗೆ ಸೇರಿದ ದನವೊಂದು ರಸ್ತೆ ದಾಟುವಾಗ ಪ್ರಮೋದ ಎಂಬುವವರಿಗೆ ಸೇರಿದ ಕಾರು ಡಿಕ್ಕಿ ಹೊಡೆಯಿತು. ಇದರಿಂದ ರಸ್ತೆಯಲ್ಲೇ ಬಿದ್ದ ದನ, ಕೆಲಕಾಲ ಉಸಿರಾಡುವ ಯತ್ನ ಮಾಡಿತಾದರೂ, ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ.
ತಾನು ಮಾಡಿದ ತಪ್ಪನ್ನ ಒಪ್ಪಿಕೊಳ್ಳದೇ ಜನರೊಂದಿಗೆ ಮಾತಿಗಿಳಿದ ಕಾರು ಚಾಲಕನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ವೇಗವಾಗಿ ವಾಹನ ಓಡಿಸಿದ್ದಲ್ಲದೇ, ವಾದ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದಾಗ, ಕಾರು ಚಾಲಕ ಸುಮ್ಮನಾದ.
ಘಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ, ಕಾರನ್ನ ವಶಕ್ಕೆ ಪಡೆದು ಪ್ರಕರಣವನ್ನ ದಾಖಲು ಮಾಡಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲವಾದರೂ, ಕಾರಿನ ಮುಂಭಾಗ ಜಖಂಗೊಂಡಿದೆ.