‘ತೆನೆ ಹೊತ್ತಮಹಿಳೆ’ ಬಿಟ್ಟು ‘ಕಮಲ’ ಹಿಡಿಯಲಿರುವ ರಾಜಣ್ಣ ಕೊರವಿ..!

ಹುಬ್ಬಳ್ಳಿ: ಜಾತ್ಯಾತೀಯ ಜನತಾದಳದಿಂದ ಮಹಾನಗರ ಪಾಲಿಕೆಗೆ ಸದಸ್ಯರಾಗುತ್ತಿದ್ದ ರಾಜಣ್ಣ ಕೊರವಿ ಬದಲಾದ ಸಮಯದಲ್ಲಿ ಕಮಲ ಹಿಡಿಯುವುದು ಬಹುತೇಕ ಖಚಿತವಾಗಿದ್ದು, ವಾರದೊಳಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆಂದು ನಂಬಲರ್ಹ ಮೂಲಗಳು ತಿಳಿಸಿವೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ವಾರ್ಡ್ 25 ರಿಂದ ಪಾಲಿಕೆಗೆ ಆಯ್ಕೆಯಾಗುತ್ತಿದ್ದಾರೆ. ಇದೀಗ ವಾರ್ಡುಗಳ ವಿಗಂಡಣೆಯಾಗಿರುವುದು ಕೂಡಾ, ಜೆಡಿಎಸ್ ಪ್ರಮುಖ ರಾಜಣ್ಣ ಕೊರವಿ ಬಿಜೆಪಿಗೆ ಸೇರುತ್ತಿರುವುದಕ್ಕೆ ಕಾರಣವೆಂದು ಹೇಳಲಾಗಿದೆ.
ಕೆಲವು ಸಾರಿ ನಾಮಾಕಾವಾಸ್ತೆ ವಿಧಾನಸಭೆ ಚುನಾವಣೆಗೂ ನಿಂತರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಜಗದೀಶ ಶೆಟ್ಟರ ವಿರುದ್ಧ ಅತೀ ಅಂತರದಿಂದ ಸೋಲನ್ನ ಅನುಭವಿಸಿದ್ದರು. ಕಳೆದ ಬಾರಿ ಮಹಾಪೌರರಾಗುತ್ತಾರೆ ಎಂದುಕೊಂಡಿದ್ದರೂ, ಕೊನೆ ಗಳಿಗೆಯಲ್ಲಿ ಅದು ಕೂಡಾ ಸಿಕ್ಕಿರಲಿಲ್ಲ.
ಭಾರತೀಯ ಜನತಾ ಪಕ್ಷಕ್ಕೆ ಸೇರುವ ಮೂಲಕ, ಮುಂದೊಂದು ತಾವೂ ಮಹಾಪೌರರಾಗಬೇಕೆಂಬ ಬಯಕೆಯನ್ನ ಈಡೇರಿಸಿಕೊಳ್ಳುವ ಮನಸ್ಸು ಕೊರವಿಯಲ್ಲಿದೆ ಎಂದು ಹೇಳಲಾಗಿದ್ದು, ಅದಕ್ಕೆ ಪೂರಕವಾಗಿ ಬಿಜೆಪಿ ಸೇರುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಅಸಲಿ ಬಿಜೆಪಿಗರಿಗೆ ಇರಿಸು-ಮುರಿಸು: ಜೆಡಿಎಸ್ ಮುಖಂಡ ರಾಜಣ್ಣ ಕೊರವಿ ಬಿಜೆಪಿ ಬಂದರೇ ಉಣಕಲ್ ಪ್ರದೇಶದಲ್ಲಿನ ಬಿಜೆಪಿ ಮುಖಂಡರಿಗೆ ಇರಿಸು-ಮುರಿಸು ಉಂಟಾಗಲಿದೆ. ಮಹಾನಗರ ಪಾಲಿಕೆಯ ಕ್ಷೇತ್ರ ವಿಗಂಡಣೆ ಆಗಿದ್ದರಿಂದ, ಹೊಸಬರಿಗೆ ಅವಕಾಶ ಸಿಗುತ್ತದೆ ಎಂದುಕೊಂಡಿದ್ದರು. ಆದರೀಗ, ತಾವು ವಿರೋಧ ಮಾಡುತ್ತಿದ್ದವರನ್ನ ಗೆಲ್ಲಿಸುವ ಸ್ಥಿತಿಯನ್ನ ಬಿಜೆಪಿ ತಂದರೇ ಹೇಗೆ ಎಂದು ವಿಚಾರ ಮಾಡುತ್ತಿದ್ದಾರೆಂದು ಹೇಳಲಾಗಿದೆ.
ರಾಜಣ್ಣ ಕೊರವಿ ಬಿಜೆಪಿ ಸೇರುವುದು ಖಚಿತವೆಂದು ಹೇಳಲಾಗುತ್ತಿದೆಯಾದರೂ, ಸ್ಥಳೀಯ ಬಿಜೆಪಿ ಮುಖಂಡರು ಅದನ್ನ ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.