ಸಮುದಾಯದ ಅಭ್ಯುದಯ ಶಿಕ್ಷಣದಿಂದ ಮಾತ್ರ ಸಾಧ್ಯ: ಕಂದಕೂರ, ಮಾಯಾಚಾರಿ, ಸಿಂದಗಿ ಮಾತಾಡಿದ್ದೇನು…!

ಹುಬ್ಬಳ್ಳಿ: ಸಮುದಾಯದ ಅಭ್ಯುದಯ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದು, ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಾರ್ವತ್ರಿಕ ದಾಖಲಾತಿ, ಹಾಜರಾತಿ, ಕಲಿಕೆ ಮತ್ತು ಉಳಿಕೆಯೊಂದಿಗೆ, ಪ್ರತಿಯೊಬ್ಬರೂ ಗುಣಾತ್ಮಕ ಶಿಕ್ಷಣ ಪಡೆದು ಆದರ್ಶ ಬದುಕು ಕಟ್ಟಿಕೊಳ್ಳಬೇಕೆಂದು ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಹೇಳಿದರು.
ಸಮೀಪದ ಕಟ್ನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ವಿದ್ಯಾಗಮ-2 ರೊಂದಿಗೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಕಿಯ ತಟ್ಟೆಯಲ್ಲಿ ಅಕ್ಷರಾಭ್ಯಾಸ ಮಾಡಿಸುವುದರ ಮೂಲಕ, ಓದುವ ಬೆಳಕು ಕಾರ್ಯಕ್ರಮದ ಪುಸ್ತಕ ಜೋಳಿಗೆಯಲ್ಲಿ ಪುಸ್ತಕಗಳನ್ನು ಸಮುದಾಯದಿಂದ ಸಂಗ್ರಹಿಸುವ ಮೂಲಕ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಶಿಕ್ಷಣ ಪಡೆದು ಆದರ್ಶಪ್ರಾಯರಾಗಿ ಬದುಕಬೇಕೆಂದು ಹೇಳಿದರು. ಕೋವಿಡ್-19 ರ ನಿಯಮಗಳನ್ನು ಮತ್ತು ಸರಕಾರದ ಆದೇಶಗಳನ್ನು ಪಾಲಿಸಿ, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶಾಲಾ ಚಟುವಟಿಕೆಗಳನ್ನು ನಿರ್ವಹಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಬಿ.ಎಸ್.ಮಾಯಾಚಾರ್ ಮಾತನಾಡಿ, ಸರಕಾರದ ಆದೇಶದಂತೆ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದ್ದು, ಮಕ್ಕಳು ಅವುಗಳ ಪ್ರಯೋಜನ ಪಡೆಯಬೇಕೆಂದು ಹೇಳಿದರು. ಬಹುದಿನಗಳ ನಂತರ ಶಾಲೆಗಳು ಮತ್ತೆ ಪುನರ್ ಪ್ರಾರಂಭವಾಗುತ್ತಿದ್ದು, ನಿರಂತರ ಕಲಿಕೆಯ ಆಯಾಮಗಳ ಮನವರಿಕೆಯನ್ನು ಶಿಕ್ಷಕರು ನಿಯಮಗಳ ಪಾಲನೆ ಮಾಡಿ ಮಕ್ಕಳಿಗೆ ಅರುಹಬೇಕಿದೆ ಎಂದು ಹೇಳಿದರು.
ಹುಬ್ಬಳ್ಳಿ ಗ್ರಾಮೀಣ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂದಗಿ ಮಾತನಾಡಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಶಿಕ್ಷಕರ ಪಾತ್ರ ಮತ್ತು ಸಮುದಾಯದ ಸಹಕಾರ ಅತ್ಯಂತ ಮಹತ್ವದ್ದಾಗಿದ್ದು ಸಕಾರಾತ್ಮಕ ಭೂಮಿಕೆಯಲ್ಲಿ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಚೆನ್ನಮ್ಮ ಗೊರ್ಲ ರವರು ಶಾಲಾ ಮಕ್ಕಳಿಗೆ ದಾನದ ರೂಪದಲ್ಲಿ ನೀಡಿದ 200 ನೋಟ್ ಬುಕ್ ಮತ್ತು ಪೆನ್ ಗಳನ್ನು, ಅಕ್ಷರ ದಾಸೋಹ ಯೋಜನೆಯ ಆಹಾರ ಧಾನ್ಯಗಳ ಕಿಟ್ ಗಳನ್ನು, ಇಕ್ರಾ ಮತ್ತು ಅಗಸ್ತ್ಯ ಪೌಂಢೇಶನ್ದವರು ನೀಡಿರುವ ಮಾಸ್ಕ್ ಗಳನ್ನು ಶಾಲಾ ಮಕ್ಕಳಿಗೆ ಗಣ್ಯರು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಮಹಾದೇವಪ್ಪ ವಿಜಾಪೂರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಗೌರಮ್ಮ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ, ಶಿಕ್ಷಣ ಸಂಯೋಜಕ ಮೃತ್ಯುಂಜಯ ಜಡಿಮಠ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ಎಸ್.ಪಾಟೀಲ, ಕಟ್ನೂರ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಬಿ.ಮುದಿಗೌಡ್ರ, ಶಾಲಾ ಮುಖ್ಯ ಶಿಕ್ಷಕ ಎಸ್.ಸಿ.ಅಂಗಡಿ, ಐ.ಇ.ಆರ್.ಟಿ ಗಳು, ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಗೀತಾ ಬಾನಿ, ಕಾರ್ಯದರ್ಶಿ ಮಂಜುನಾಥ, ಶಾಲಾ ಸಿಬ್ಬಂದಿ ವರ್ಗ, ಶಾಲಾ ಅಡುಗೆ ಸಹಾಯಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಗಣ್ಯರು ಉಪಸ್ಥಿತರಿದ್ದರು