ಮೊರಬದ ಕಾಲುವೆಯಲ್ಲಿ ಮುಖ್ಯ ಪೇದೆ ಮಗನ ದುರ್ಮರಣ
1 min readಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಡಿಸಿಆರ್ ಬಿ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಮುಖ್ಯ ಪೇದೆಯ ಮಗನೋರ್ವ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನವಲಗುಂದ ತಾಲೂಕಿನ ಮೊರಬ ಬಳಿ ಸಂಭವಸಿದೆ.
ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ಪರಶುರಾಮ ಮನಗುಂಡಿ ಅವರ ಪುತ್ರ ಕಾಂತೇಶ ಮನಗುಂಡಿಯೇ ಸಾವಿಗೀಡಾದ ಯುವಕನಾಗಿದ್ದಾನೆ.
ಗೆಳೆಯರೊಂದಿಗೆ ಕಾಲುವೆಯಲ್ಲಿ ಆಟವಾಡಲು ಹೋದಾಗ ದುರ್ಘಟನೆ ಸಂಭವಿಸಿದ್ದು, 19 ವರ್ಷದ ಕಾಂತೇಶನ ಶವ ನವಲಗುಂದ ತಾಲೂಕಿನ ಮೊರಬ ಗ್ರಾಮದ ಬಳಿಯಿರುವ ಕಾಲುವೆಯಲ್ಲಿ ದೊರೆತಿದೆ.
ಮುಖ್ಯ ಪೇದೆ ಪರಶುರಾಮ ಮನಗುಂಡಿಯವರ ಮೂರು ಮಕ್ಕಳ ಪೈಕಿ ಈಗಾಗಲೇ ಎರಡು ಮಕ್ಕಳು ಅಕಾಲಿಕವಾಗಿ ಸಾವನ್ನಪ್ಪಿದ್ದರು. ಉಳಿದ ಮಗ ಕಾಂತೇಶ ಕೂಡ ದುರ್ಮರಣಕ್ಕೀಡಾಗಿದ್ದು ಕುಟುಂಬಕ್ಕೆ ದಿಕ್ಕೆ ತೋಚದಂತಾಗಿದೆ.
ಪ್ರಕರಣದ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.