“ನುಗ್ಗಿಕೇರಿ ಪಾರ್ಟಿ”- “ಬೆರಳ್ ಕಟ್” – ವಿಕೆಂಡ್ ಮಸ್ತಿಗೆ ತೆರಳಿದ ನಾಲ್ವರು ಆಸ್ಪತ್ರೆಗೆ
ಧಾರವಾಡ: ಭಾನುವಾರದ ಮೋಜಿಗಾಗಿ ನುಗ್ಗಿಕೇರಿಯ ಪ್ರಾರ್ಥನಾ ಮಂದಿರ ಬಳಿ ಪಾರ್ಟಿ ಮಾಡಲು ಹೋದ ಯುವಕರೇ ಬಡಿದಾಡಿಕೊಂಡು ಬೆರಳು ಕಟ್ ಮಾಡಿದ ಘಟನೆ ಧಾರವಾಡ ಸಮೀಪದ ನುಗ್ಗಿಕೇರಿ ಬಳಿ ಸಂಭವಿಸಿದೆ.
ಧಾರವಾಡದಿಂದ ಹೊರವಲಯದಲ್ಲಿರುವ ಪ್ರದೇಶಕ್ಕೆ ಹೋಗಿದ್ದ ಧಾರವಾಡ ಮಾಳಮಡ್ಡಿ ನಿವಾಸಿಗಳಾದ ರೋಹಿತ ಸುನೀಲ ತೆಲಗಾರ, ರಾಹುಲ ಸುನೀಲ ತೆಲಗಾರ ಜೊತೆಗೆ ಯಲ್ಲಪ್ಪ ಕಲ್ಲಪ್ಪ ಬೆಳ್ಳಿಗಟ್ಟಿ ಮತ್ತು ಗುರುಶಿದ್ಧಪ್ಪ ಬೆಳ್ಳಿಗಟ್ಟಿ ಬಡಿದಾಡಿಕೊಂಡಿದ್ದಾರೆ.
ಓರ್ವ ಯುವಕನ ಕೈಗೆ ಚಾಕು ಹಾಕಿದ್ದರಿಂದ ಬೆರಳು ಕಟ್ ಆಗಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಪಾರ್ಟಿ ಮಾಡುತ್ತಿದ್ದ ವೇಳೆಯಲ್ಲಿ ಯುವಕನೋರ್ವ, ಉಳಿದವರ ಬಗ್ಗೆ ಅಸಹ್ಯವಾಗಿ ಮಾತನಾಡಿದ ಪರಿಣಾಮ, ಬಡಿದಾಡಿಕೊಂಡು ಬೆರಳನ್ನೇ ಕತ್ತರಿಸುವಂತೆ ಮಾಡಿಕೊಂಡಿದ್ದಾರೆ.
ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.


