ಬೆಳವಟಗಿಯಲ್ಲಿ ಹಾವು ಕಡಿದು ರೈತ ಸಾವು: ಕಣವಿಹೊನ್ನಾಪುರದಲ್ಲಿ ವಿಷ ಸೇವಿಸಿ ವಿವಾಹಿತ

ಬೆಳವಟಗಿಯಲ್ಲಿ ಹಾವು ಕಡಿದು ರೈತ ಸಾವು
ಧಾರವಾಡ: ಹೊಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ವಿಷಕಾರಿ ಹಾವೊಂದು ಕಡಿದ ಪರಿಣಾಮ ರೈತನೋರ್ವ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ನಡೆದಿದೆ.
ಬೆಳವಟಗಿ ಗ್ರಾಮದ 65 ವಯಸ್ಸಿನ ರೈತ ನಿಂಗಪ್ಪ ಬಸಪ್ಪ ಬೆಲ್ಲದ ಎಂದು ತಿಳಿದು ಬಂದಿದ್ದು, ಪ್ರತಿದಿನದಂತೆ ಇವತ್ತು ಕೂಡಾ ತಮ್ಮ ಹೊಲದಲ್ಲಿ ಕೆಲಸಕ್ಕೆ ಹೋದಾಗ ಈ ಘಟನೆ ನಡೆದಿದೆ.
ಹೊಲದಲ್ಲಿ ರೈತ ಕೆಲಸವನ್ನು ಮಾಡುವಾಗ ಗೊತ್ತಾಗದೆ ಹಾವಿನ ಮೇಲೆ ಕಾಲನ್ನು ಇಟ್ಟಾಗ, ಹಾವು ರೈತನ ಕಾಲಿಗೆ ಕಡಿದಿದೆ. ಕೂಡಲೇ, ನವಲಗುಂದದ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರೈತ ನಿಂಗಪ್ಪ ಸಾವನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿದ ವಿವಾಹಿತ
ಧಾರವಾಡ: ಮದುವೆಯಾಗಿ ಎರಡು ವರ್ಷದಲ್ಲಿಯೇ ಕೌಟುಂಬಿಕವಾಗಿ ಬೇಸತ್ತ ವಿವಾಹಿತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ತಾಲೂಕಿನ ಕಣವಿ ಹೊನ್ನಾಪುರ ಗ್ರಾಮದಲ್ಲಿ ನಡೆದಿದೆ.
ಗಣೇಶ ಎಂಬ ವಿವಾಹಿತನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗಾಗಿ ಆತನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
25 ವರ್ಷದ ಗಣೇಶನಿಗೆ ಎರಡು ವರ್ಷಗಳ ಹಿಂದೆ ಮದುವೆ ಆಗಿತ್ತು. ಆದ್ರೆ, ನಿರಂತರವಾಗಿ ಜಗಳಗಳು ನಡೆಯುತ್ತಿದ್ದವು. ಪತ್ನಿ ಹಾಗೂ ಮನೆಯವರನ್ನ ನಿಭಾಯಿಸಲಾರದೇ ಗಣೇಶ ವಿಷ ಸೇವಿಸಿದ್ದಾನೆಂದು ಹೇಳಲಾಗಿದೆ.
ವಿಷಸೇವಿಸಿ ತೀವ್ರ ಅಸ್ವಸ್ಥನಾಗಿದ್ದ ಗಣೇಶನನ್ನ ಧಾರವಾಡದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸಗೆ ದಾಖಲು ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ನಮೂದಾಗಿದೆ.