ಧಾರವಾಡದ ಗಾಂಧಿನಗರದಲ್ಲಿ ಮನೆ, ಶೆಟ್ಟರ ಕಾಲನಿಯಲ್ಲಿ ಕಾರು ಕಳ್ಳತನ

ಧಾರವಾಡ: ಮನೆ ಮುಂದೆ ನಿಲ್ಲಿಸಿದ ಮಾರುತಿ ಆಲ್ಟೋ ಕಾರನ್ನ ಕದ್ದು ಪರಾರಿಯಾಗಿರುವ ಘಟನೆ ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯಲ್ಲಿ ನಡೆದಿದ್ದು, ಮನೆಯವರು ಹೊರಗೆ ಹೋದಾಗ ಘಟನೆ ನಡೆದಿದೆ. ಧಾರವಾಡ ನಗರದ ಯಾಲಕ್ಕಿ ಶೆಟ್ಟರ ಕಾಲೋನಿಯ ಶಂಕರಪುರ ರಸ್ತೆಯಲ್ಲಿರುವ ಮನೋಹರ ನಿಂಬರಗಿಯವರ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಮನೆ ಮುಂದೆ ನಿಲ್ಲಿಸಿದ್ದ 3 ಲಕ್ಷ ಮೌಲ್ಯದ ಆಲ್ಟೊ ಕಾರು ಕಳ್ಳರ ಪಾಲಾಗಿದ್ದು, ಡೋರ್ ಲಾಕ್ ಮಾಡಿ ಹೋಗಿದ್ದರೂ ಕಳ್ಳತನ ನಡೆದಿರುವುದು ಅಚ್ಚರಿ ಮೂಡಿಸಿದೆ. ಈಗಾಗಲೇ ಇದೇ ಪ್ರದೇಶಕ್ಕೆ ಅಂಟಿಕೊಂಡೇ ಕೆಲವು ದಿನಗಳ ಹಿಂದೆ ಇನ್ನೋವ್ವಾ ಕ್ರಿಸ್ಟಾ ವಾಹನವನ್ನ ಕದ್ದು ಪರಾರಿಯಾಗಿದ್ದಾರೆ.
ಘಟನೆಯ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾಗಿರಿ ಠಾಣೆಯ ಪೊಲೀಸರು, ಮನೋಹರ ನಿಂಬರಗಿಯವರ ಮನೆ ನಂಬರ 38ಕ್ಕೆ ಹೋಗಿ ಪರಿಶೀಲನೆ ಮಾಡಿ ಬಂದಿದ್ದು, ಈ ಬಗ್ಗೆ ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.
—
ಮನೆಯವರು ಯಾರೂ ಇಲ್ಲದ ಸಮಯದಲ್ಲಿ ಮನೆ ಬಾಗಿಲನ್ನ ಮುರಿದು ಸಾವಿರಾರೂ ರೂಪಾಯಿಯ ನಗ-ನಗದು ಕಳ್ಳತನ ಮಾಡಿರುವ ಘಟನೆ ಧಾರವಾಡದ ಗಾಂಧಿನಗರದ ಬಂಡೆಮ್ಮ ಗುಡಿ ಹತ್ತಿರವಿರುವ ಮನೆಯಲ್ಲಿ ನಡೆದಿದೆ. ಭದ್ರಾವತಿ ಮೂಲದ ಪ್ರವೀಣ ಆರ್ ಎನ್ನುವವರು ಬಾಡಿಗೆ ಮಾಡಿಕೊಂಡಿದ್ದ ಮನೆಯಲ್ಲಿ ಕಳ್ಳತನ ನಡೆದಿದ್ದು, 1 ಟಿವಿ, 2 ಗ್ರಾಂ ಬಂಗಾರದ ಉಂಗುರ ಹಾಗೂ ಬೆಳ್ಳಿ ಸಾಮಗ್ರಿ ಸೇರಿದಂತೆ ಒಟ್ಟು 30 ಸಾವಿರ ರೂಪಾಯಿ ಕಳ್ಳತನವಾಗಿದೆ.
ಪ್ರವೀಣ ಅವರು ಕಳೆದ ದಿನದ ಹಿಂದೆ ಮನೆಗೆ ಬೀಗ ಹಾಕಿ ಪರವೂರಿಗೆ ಹೋಗಿದ್ದರು. ಇಂದು ಮನೆಗೆ ಬಂದು ನೋಡಿದಾಗ, ಟ್ರೇಜರಿಯಲ್ಲಿನ ಸಾಮಾನುಗಳು ಸಂಪೂರ್ಣವಾಗಿ ಚೆಲ್ಲಾಪಿಲ್ಲಿಯಾಗಿದ್ದು, ಕಳ್ಳತನವಾಗಿರುವುದು ಗೊತ್ತಾಗಿದೆ.
ತಕ್ಷಣವೇ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದು, ಪೊಲೀಸರು ಮನೆಗೆ ಆಗಮಿಸಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.