93 ಮಾರ್ಕ್ಸ್ ಬಂದಿದ್ದಕ್ಕೆ ಬಿಇಓ ಕ್ಲಾಸ್: ಮನನೊಂದು ಮಾತ್ರೆ ನುಂಗಿ ಪ್ರಾಣಬಿಟ್ಟ 10ನೇ ತರಗತಿ ವಿದ್ಯಾರ್ಥಿನಿ…!!!
ಪರೀಕ್ಷೆಯ ಅಂಕಗಳ ಒತ್ತಡ ಹಾಗೂ ಶಿಕ್ಷಣಾಧಿಕಾರಿಗಳ ಬುದ್ಧಿವಾದದಿಂದ ಮನನೊಂದ 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ಇತ್ತೀಚೆಗೆ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO), ಆಕೆಯು 500ಕ್ಕೆ 93 ಅಂಕ ಗಳಿಸಿದ್ದನ್ನು ಕಂಡು “ನೀನು ಪಾಸ್ ಆಗುತ್ತೀಯಾ?” ಎಂದು ಪ್ರಶ್ನಿಸಿ ಬುದ್ಧಿ ಹೇಳಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಮಂಕಾಗಿದ್ದ ಬಾಲಕಿ, 2ನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ ಫೇಲ್ ಆಗುವ ಭಯದಿಂದ ಜನೆವರಿ 28ರ ರಾತ್ರಿ ಮನೆಯಲ್ಲಿದ್ದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ತಕ್ಷಣ ಆಕೆಯನ್ನು ಕಡೂರು ಹಾಗೂ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾಳೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೋಷಕರು ಈವರೆಗೆ ಯಾವುದೇ ದೂರು ದಾಖಲಿಸಿಲ್ಲ. ಅಂಕಗಳ ಒತ್ತಡವು ಒಂದು ಎಳೆಯ ಜೀವವನ್ನು ಬಲಿಪಡೆದಿರುವುದು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.
