ಗನ್ ಪಾಯಿಂಟ್‌ನಲ್ಲಿ ಗೋಲ್ಡ್ ಲೂಟಿ: ಅಡ್ಡ ಬಂದವನ ಮೇಲೆ ಗುಂಡಿನ ದಾಳಿ…
ಹಲಸಂಗಿ ಗ್ರಾಮದಲ್ಲಿ ಸಿನಿಮೀಯ ಮಾದರಿ ದರೋಡೆ: ಪಿಸ್ತೂಲ್ ತೋರಿಸಿ ಚಿನ್ನಾಭರಣ ಲೂಟಿ, ಯುವಕನ ಮೇಲೆ ಗುಂಡಿನ ದಾಳಿ
ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಸೋಮವಾರ ಸಂಜೆ ಹಾಡಹಗಲೇ ಭೀಕರ ದರೋಡೆ ನಡೆದಿದೆ. ಪಿಸ್ತೂಲ್ ತೋರಿಸಿ ಚಿನ್ನಾಭರಣ ಮಳಿಗೆಯನ್ನು ಲೂಟಿ ಮಾಡಿದ ಇಬ್ಬರು ಮುಸುಕುಧಾರಿ ದರೋಡೆಕೋರರು, ಅಡ್ಡ ಬಂದ ಯುವಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಘಟನೆಯ ವಿವರ: ಹಲಸಂಗಿ ಗ್ರಾಮದ ಮಹಾರುದ್ರ ಕಂಚಗಾರ ಎಂಬುವವರಿಗೆ ಸೇರಿದ ಚಿನ್ನಾಭರಣ ಮಳಿಗೆಗೆ ಸೋಮವಾರ ಸಂಜೆ ಸುಮಾರು 4 ಗಂಟೆಗೆ ಬುಲೆಟ್ ಬೈಕಿನಲ್ಲಿ ಇಬ್ಬರು ಖದೀಮರು ಆಗಮಿಸಿದ್ದಾರೆ. ಹೆಲ್ಮೆಟ್, ಜಾಕೆಟ್ ಹಾಗೂ ಕೈಗೆ ಗ್ಲೌಸ್ ಧರಿಸಿದ್ದ ದರೋಡೆಕೋರರು ನೇರವಾಗಿ ಅಂಗಡಿಗೆ ನುಗ್ಗಿ ಮಾಲೀಕರಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ದರೋಡೆ ನಡೆಸಿದ್ದಾರೆ.
ವೃದ್ಧೆಗೆ ಪ್ರಾಣ ಬೆದರಿಕೆ: ದರೋಡೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಂಗಡಿಯತ್ತ ಬಂದ ವೃದ್ಧೆಯೊಬ್ಬರಿಗೂ ದರೋಡೆಕೋರರು ಗನ್ ತೋರಿಸಿದ್ದಾರೆ. ಈ ವೇಳೆ ಗಾಬರಿಗೊಂಡ ವೃದ್ಧೆ ಕೈಮುಗಿದು ಪ್ರಾಣಭಿಕ್ಷೆ ಬೇಡಿದ್ದಾರೆ. ದರೋಡೆ ಮಾಡಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಬೆನ್ನಟ್ಟಲು ಯತ್ನಿಸಿದಾಗ, ಕಿರಾತಕರು ಗುಂಡು ಹಾರಿಸಿದ್ದಾರೆ. ಈ ವೇಳೆ ಆತ್ಮಲಿಂಗ ಹೂಗಾರ ಎಂಬ ಯುವಕನ ಬಲಗಾಲಿಗೆ ಗುಂಡು ತಗುಲಿದ್ದು, ತಕ್ಷಣ ಆತನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ: ದರೋಡೆಕೋರರು ಅಂಗಡಿಗೆ ನುಗ್ಗಿದ ಮತ್ತು ಗುಂಡು ಹಾರಿಸಿ ಪರಾರಿಯಾದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಎಷ್ಟು ಮೊತ್ತದ ಚಿನ್ನಾಭರಣ ದೋಚಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಡಹಗಲೇ ನಡೆದ ಈ ಘಟನೆಯಿಂದ ಜಿಲ್ಲೆಯ ವ್ಯಾಪಾರಸ್ಥರಲ್ಲಿ ಆತಂಕ ಮನೆಮಾಡಿದೆ.
