ಗೋವಾ ಟು ಧಾರವಾಡ: ಅಂತರರಾಜ್ಯ ಬೈಕ್ ಕಳ್ಳರ ಜಾಲ ಬಯಲು ಮಾಡಿದ PI ಪ್ರಭು ಗಂಗೇನಹಳ್ಳಿ ಟೀಂ…
ಧಾರವಾಡ ಪೊಲೀಸರ ಭರ್ಜರಿ ಬೇಟೆ: ಇಬ್ಬರು ಬೈಕ್ ಕಳ್ಳರ ಬಂಧನ, 9 ಬೈಕ್‌ಗಳು ವಶ
ಧಾರವಾಡ: ನಗರದಲ್ಲಿ ಸರಣಿ ಬೈಕ್ ಕಳ್ಳತನ ಮಾಡಿ ಜನರಲ್ಲಿ ಆತಂಕ ಮೂಡಿಸಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಉಪನಗರ ಪೊಲೀಸ್ ಠಾಣೆಯ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಸುಮಾರು 3.65 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖಾ ತಂಡದ ಕಾರ್ಯಾಚರಣೆ: ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿದ್ದ ವಾಹನ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು, ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಧಾರವಾಡ ಉಪವಿಭಾಗದ ಎಸಿಪಿ ಪ್ರಶಾಂತ್ ಸಿದ್ದನಗೌಡ್ರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ಪ್ರಭು ಗಂಗೇನಹಳ್ಳಿ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.
ಅಂತರರಾಜ್ಯ ಕಳ್ಳರ ಜಾಲ: ಬಂಧಿತ ಆರೋಪಿಗಳಿಂದ ಕೇವಲ ಧಾರವಾಡ ಮಾತ್ರವಲ್ಲದೆ, ಹುಬ್ಬಳ್ಳಿ ಶಹರ, ಹಾವೇರಿ ಶಹರ ಹಾಗೂ ನೆರೆಯ ಗೋವಾ ರಾಜ್ಯದಲ್ಲಿ ಕಳ್ಳತನವಾಗಿದ್ದ ಒಟ್ಟು 9 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ತಂಡಕ್ಕೆ ಪ್ರಶಂಸೆ: ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪಿಎಸ್‌ಐ ಮಲ್ಲಿಕಾರ್ಜುನ್ ಹೊಸೂರ್, ಎಮ್.ವೈ. ಕುರ್ತಕೋಟಿ, ಸಿ.ಡಿ. ಬಳ್ಳಾರಿ, ಎಎಸ್‌ಐ ನಾರಾಯಣ ಜಾಧವ ಹಾಗೂ ಸಿಬ್ಬಂದಿಗಳಾದ ಮಲ್ಲೇಶ ಲಮಾಣಿ, ಆರ್.ಕೆ. ಅತ್ತಾರ ಸೇರಿದಂತೆ ಇಡೀ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
