ಹತ್ತೂರಿಗೆ ಮಾದರಿಯಾದ “ಶಿವಳ್ಳಿಯ ಕಲಿಕಾ ಹಬ್ಬ”- ಕಲಿಕೆಯನ್ನ ಸಂಭ್ರಮಿಸಿದ ವಿದ್ಯಾರ್ಥಿಗಳು…
ಶಿವಳ್ಳಿಯಲ್ಲಿ ಕಲಿಕಾ ಹಬ್ಬದ ಸಂಭ್ರಮ: ಮಕ್ಕಳ ಸೃಜನಶೀಲತೆಗೆ ವೇದಿಕೆ
ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಕಲಿಕಾ ಹಬ್ಬ’ವು ಮಕ್ಕಳ ಸೃಜನಶೀಲತೆ ಹಾಗೂ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಯಿತು.
ಸೋಮಾಪುರ, ಗೋವನಕೊಪ್ಪ, ಗೊಂಗಡಿಕೊಪ್ಪ, ಮಾರಡಗಿ, ಹೆಬ್ಬಳ್ಳಿ, ವನಹಳ್ಳಿ ಹಾಗೂ ಶಿವಳ್ಳಿ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕೇವಲ ಪಠ್ಯಕ್ಕೆ ಸೀಮಿತವಾಗದೆ ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಜೀವನ ಕೌಶಲ್ಯ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿವಿಧ ಚಟುವಟಿಕೆಗಳು: ಮಕ್ಕಳಿಗಾಗಿ ಸಂತಸದಾಯಕ ಗಣಿತ, ಛದ್ಮವೇಶ, ರಸಪ್ರಶ್ನೆ, ಪಾತ್ರಾಭಿನಯ, ಚಿತ್ರ ವಿಶ್ಲೇಷಣೆ, ಕೈಬರಹ ಹಾಗೂ ಕಥೆ ಹೇಳುವ ಸ್ಪರ್ಧೆಗಳನ್ನು ನಡೆಸಲಾಯಿತು. ವಿಶೇಷವಾಗಿ ‘ಟ್ರೆಷರ್ ಹಂಟ್’ ಶೈಕ್ಷಣಿಕ ಆಟವು ಮಕ್ಕಳ ಗಮನ ಸೆಳೆಯಿತು. ಪಾಲಕರು ಮತ್ತು ಮಕ್ಕಳ ಸಂಬಂಧದ ಕುರಿತು ನಡೆದ ಸಂವಾದವು ಅರ್ಥಪೂರ್ಣವಾಗಿತ್ತು.
ಗಣ್ಯರ ಉಪಸ್ಥಿತಿ: ಶಿಕ್ಷಣ ಸಂಯೋಜಕ ಎ.ಎಚ್.ನದಾಫ್ ಕಾರ್ಯಕ್ರಮ ಉದ್ಘಾಟಿಸಿದರು. ಸಿಆರ್‌ಪಿಗಳಾದ ಮಲ್ಲಿಕಾರ್ಜುನ ಉಪ್ಪಿನ ಹಾಗೂ ದಳವಾಯಿ ಮಾರ್ಗದರ್ಶನ ನೀಡಿದರು. ಶಿವಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಎನ್.ಎಸ್.ಕುಂಬಾರ, ಶಿಕ್ಷಕ ಸಂಘದ ನಿಂಗಪ್ಪ ಕಂಬಾರ, ಅಜಿತ ದೇಸಾಯಿ, ಎ.ಐ.ಲಕ್ಕಮ್ಮನವರ ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ ಮೊರಬ, ಉಪಾಧ್ಯಕ್ಷೆ ರೇಖಾ ಗೋಯಪ್ಪನವರ, ಸದಸ್ಯರಾದ ಈರಣ್ಣ ಬಡಪ್ಪನವರ, ಜ್ಯೋತಿ ಶಿಂಪಿ, ಶಾಬುದ್ಧೀನ ಮುಲ್ಲಾ, ಚಿದಾನಂದ ಬಾರಕೇರ, ಶಮ್ಮುಶುದ್ಧೀನ ನಾಯ್ಕರ್, ರೇಖಾ ಕದಂ ಸೇರಿದಂತೆ ಗ್ರಾಮದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿದ್ದರು.
