ಧಾರವಾಡ: ಮಕ್ಕಳ ಪಾಲಿಗೆ ದೇವರಾದ ‘ಅಪಘಾತ’: ಕಿಡ್ನ್ಯಾಪರ್ ಸ್ಕೆಚ್ ಉಲ್ಟಾ…!!!
ಧಾರವಾಡದ ಶಾಲಾ ಮಕ್ಕಳ ಅಪಹರಣ ಪ್ರಕರಣ: ಜೋಯ್ಡಾ ಬಳಿ ಪತ್ತೆ, ಕಿಡ್ನ್ಯಾಪರ್ ಅರೆಸ್ಟ್
ಧಾರವಾಡ: ನಗರದ ಕಮಲಾಪುರದ 4ನೇ ಶಾಲೆಯಿಂದ ಶುಕ್ರವಾರ ಮಧ್ಯಾಹ್ನ ಅಪಹರಣಕ್ಕೊಳಗಾಗಿದ್ದ ಇಬ್ಬರು ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ಬಳಿ ಪತ್ತೆಯಾಗಿದ್ದಾರೆ. ಅಪಹರಣಕಾರನ ಬೈಕ್ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಈ ಇಡೀ ಕೃತ್ಯ ಬಯಲಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಕಮಲಾಪುರದ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಲಕ್ಷ್ಮೀ ಕರಿಯಪ್ಪನವರ ಹಾಗೂ ತನ್ವೀರ್ ದೊಡಮನಿ ಎಂಬ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಸಮಯದಲ್ಲಿ ಶಾಲೆಯಿಂದ ಹೊರಬಂದಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮಕ್ಕಳನ್ನು ಪುಸಲಾಯಿಸಿ ತನ್ನ ಬೈಕ್ ಮೇಲೆ ಕುಳ್ಳಿರಿಸಿಕೊಂಡು ಪರಾರಿಯಾಗಿದ್ದನು. ಈ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಯಿಂದ ಕಮಲಾಪುರ ಭಾಗದಲ್ಲಿ ತೀವ್ರ ಆತಂಕ ಮೂಡಿತ್ತು.
ಬಯಲಾದ ಕಿಡ್ನ್ಯಾಪ್ ಕೃತ್ಯ:
ಮಕ್ಕಳನ್ನು ಅಪಹರಿಸಿ ಜೋಯ್ಡಾ ಮಾರ್ಗವಾಗಿ ಕರೆದೊಯ್ಯುತ್ತಿದ್ದಾಗ, ಆರೋಪಿಯ ಬೈಕ್ ಜೋಯ್ಡಾ ಬಳಿ ಅಪಘಾತಕ್ಕೀಡಾಗಿದೆ. ಇದರಿಂದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಸ್ಥಳೀಯರು ಓಡಿ ಬಂದು ಮಕ್ಕಳ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಕ್ಕಳು ತಾವು ಧಾರವಾಡದವರೆಂದು ತಿಳಿಸಿದ್ದಾರೆ. ಅನುಮಾನಗೊಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಸುಪರ್ದಿಯಲ್ಲಿ ಮಕ್ಕಳು:
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಕ್ಕಳನ್ನು ರಕ್ಷಿಸಿ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಬೈಕ್ ಸವಾರನನ್ನು ಬಂಧಿಸಲಾಗಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ. ಮಕ್ಕಳನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಮಕ್ಕಳು ಅಪಾಯದಿಂದ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸಾರ್ವಜನಿಕರಿಗೆ ಸೂಚನೆ: ಶಾಲಾ ಮಕ್ಕಳ ರಕ್ಷಣೆ ಮತ್ತು ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ ಎಂದು ಪೊಲೀಸರು ಈ ಮೂಲಕ ಮನವಿ ಮಾಡಿದ್ದಾರೆ.
