ಮರ್ಯಾದಾ ಹತ್ಯೆ: ಕಠಿಣ ಕಾನೂನು ಅಗತ್ಯ- ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆಗ್ರಹ…
ಮರ್ಯಾದಾ ಹತ್ಯೆ ಪ್ರಕರಣ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಂಕರ ಪಾಟೀಲ ಮುನೇನಕೊಪ್ಪ – ಅಮಾನವೀಯ ಘಟನೆ ತಡೆಯಲು ಕಠಿಣ ಕಾನೂನಿಗೆ ಆಗ್ರಹ…
ಹುಬ್ಬಳ್ಳಿ: ರಾಜ್ಯವನ್ನು ಬೆಚ್ಚಿಬೀಳಿಸಿದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆಯಲ್ಲಿ ಗಾಯಗೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಇಂದು ಭೇಟಿ ಮಾಡಿದರು.
ಗಾಯಾಳುಗಳ ಆರೋಗ್ಯ ಪರಿಸ್ಥಿತಿಯನ್ನು ವೈದ್ಯರಿಂದ ವಿಚಾರಿಸಿದ ಅವರು, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರ ಮಾತಿನ ಪ್ರಮುಖ ಅಂಶಗಳು ಇಲ್ಲಿವೆ:
ಇದೊಂದು ಅಮಾನವೀಯ ಕೃತ್ಯ: “ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಘಟನೆ ಇದಾಗಿದೆ. ಪ್ರೀತಿ-ವಿಶ್ವಾಸದ ಹೆಸರಿನಲ್ಲಿ ರಕ್ತ ಹರಿಸುವುದು ಸಂಸ್ಕೃತಿಯಲ್ಲ. ಇಂತಹ ಕ್ರೂರ ಘಟನೆಗಳು ಮರುಕಳಿಸದಂತೆ ತಡೆಯಲು ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು” ಎಂದರು.
ಹೊಸ ಕಾನೂನಿನ ಅಗತ್ಯವಿದೆ: ದೇಶದಲ್ಲಿ ಮರ್ಯಾದಾ ಹತ್ಯೆಗಳ ಸರಣಿ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಮುನೇನಕೊಪ್ಪ ಅವರು, “ಕೇವಲ ಮಾತುಗಳಿಂದ ಇಂತಹ ಕೃತ್ಯ ತಡೆಯಲು ಸಾಧ್ಯವಿಲ್ಲ. ಸರ್ಕಾರವು ವಿಶೇಷ ಆಸಕ್ತಿ ವಹಿಸಿ, ಮರ್ಯಾದಾ ಹತ್ಯೆ ತಡೆಗೆ ಕಟ್ಟುನಿಟ್ಟಾದ ಹೊಸ ಕಾನೂನನ್ನು ಜಾರಿಗೆ ತರಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ಇಂತಹ ಮನಸ್ಥಿತಿ ಇರುವವರಿಗೆ ಭಯ ಬರುತ್ತದೆ” ಎಂದರು.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿ: ಇದೇ ವೇಳೆ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ ಮಾಜಿ ಸಚಿವರು, “ಈ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಂತ್ರಸ್ತರಿಗೆ ರಕ್ಷಣೆ ನೀಡುವಲ್ಲಿ ಹಾಗೂ ಮುಂಜಾಗ್ರತೆ ವಹಿಸುವಲ್ಲಿ ಇಲಾಖೆಗಳು ವಿಫಲವಾಗಿವೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮೇಲೆ ಸರ್ಕಾರ ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಸಂತ್ರಸ್ತರಿಗೆ ಸರ್ಕಾರದ ನೆರವು ಸಿಗಲಿ: ”ಗಾಯಗೊಂಡವರು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಸರ್ಕಾರ ಅವರಿಗೆ ಗರಿಷ್ಠ ಪರಿಹಾರ ನೀಡುವುದರ ಜೊತೆಗೆ, ಅವರಿಗೆ ಸಂಪೂರ್ಣ ಭದ್ರತೆ ಒದಗಿಸಬೇಕು” ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ದಲಿತ ಸಮಾಜದ ಮುಖಂಡರು ಉಪಸ್ಥಿತರಿದ್ದರು.
