ಶಿಕ್ಷಣ ಇಲಾಖೆಯ “33 ವರ್ಗಾವಣೆ”ಯಲ್ಲಿ ಅವ್ಯವಹಾರ- ಮೀಡಿಯೇಟರ್ ಮಾಡಿದ್ದೆ “ಶಾ-Money” ಅಂತೆ…

ಧಾರವಾಡ: ಕಳೆದ ಜುಲೈ 29ರಂದು ಹೊರಡಿಸಲಾದ ಧಾರವಾಡ ವಲಯ ಶಿಕ್ಷಣ ಇಲಾಖೆಯ ಸುಮಾರು 33 ನೌಕರರ ವರ್ಗಾವಣೆಯಲ್ಲಿ ಭಾರೀ ಅವ್ಯವಹಾರದ ಆರೋಪಗಳು ಕೇಳಿ ಬಂದಿದ್ದು ಕೆಲ ನೌಕರರಿಂದ ಲಕ್ಷಾಂತರ ರೂಪಾಯಿ ‘ಕಪ್ಪ’ ಹಣ ವಸೂಲಿ ಮಾಡಿ, ಅದರಲ್ಲಿ ಬಹುಪಾಲು ಹಣವನ್ನು ಬೆಂಗಳೂರಿನಲ್ಲಿಯ ಸಚಿವರ ಆಪ್ತರೊಬ್ಬರಿಗೆ ತಲುಪಿಸಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿವೆ.
ಈ ವರ್ಗಾವಣೆಯ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಶಾ-money ಕಳೆದ ತಿಂಗಳು ಬೆಂಗಳೂರಿಗೆ ತೆರಳಿ ನೌಕರರಿಂದ ವಸೂಲಿ ಮಾಡಿದ್ದ ‘ಕಪ್ಪ’ ಹಣವನ್ನು ತನ್ನ ಸ್ವಂತ ಹಣವೆಂದು ಹೇಳಿ ಸಚಿವರ ಆಪ್ತರೊಬ್ಬರಿಗೆ ಮುಟ್ಟಿಸಿ, ತನ್ನ ಖುರ್ಚಿಗೆ ಯಾವುದೇ ದಕ್ಕೆ ಬರಬಾರದೆಂದು ಆಪ್ತರಿಂದ ಆಣೆ ಪ್ರಮಾಣ ಮಾಡಿಸಿ ‘ದೇವ್ರ್ ಮ್ಯಾಲಿ ಆಣ್ರೀ, ನೀವೇ ನನ್ಗ್ ಇದೊಂದು ವರ್ಷ ಕಮೀಶನರ್ ಕಚೇರ್ಯಾಗ್ಯ ಉಳ್ಸ್ ಬೆಕ್ರೀ…’ ಎಂದು ಬೇಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಸದ್ಯ, ವರ್ಗಾವಣೆಗೊಂಡಿರುವ ಕೆಲ ನೌಕರರು ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿ, ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ತಿಳಿದು ಬಂದಿದ್ದು, ಈ ವರ್ಗಾವಣೆ ಆದೇಶಗಳನ್ನು ತಕ್ಷಣವೇ ರದ್ದುಪಡಿಸಲಾಗದಿದ್ದರೆ, ಮುಂಬರುವ ದಿನಗಳಲ್ಲಿ ಅಪರ ಆಯುಕ್ತರ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.