ಉತ್ತರ ಕರ್ನಾಟಕ ಸೊಗಡಿನ ಕಥೆ ‘ಹುಲಿ ಬೀರ’… ನವೆಂಬರ್‌ನಲ್ಲಿ ತೆರೆಗೆ…

ಮದರಂಗಿ ಮಲ್ಲಿಕಾರ್ಜುನ ನಿರ್ದೇಶನದ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಂಜನ್ ಮತ್ತು ಚೈತ್ರ ತೋಟದ ನಟಿಸಿದ್ದಾರೆ. ಈ ಸಿನಿಮಾ ನವೆಂಬರ್‌ನಲ್ಲಿ ತೆರೆಕಾಣಲಿದೆ.
ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಾಣ ಮಾಡಿರುವ ಚಿತ್ರ ‘ಹುಲಿಬೀರ’. ಈ ಹಿಂದೆ ‘ರಂಗ್ ಬಿರಂಗಿ’ ಚಿತ್ರ ನಿರ್ದೇಶಿಸಿದ್ದ ಮದರಂಗಿ ಮಲ್ಲಿಕಾರ್ಜುನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ‘ಯರ್ರಾಬಿರ್ರಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಂಜನ್ ಚಿತ್ರದ ನಾಯಕನಾಗಿ ನಟಿಸಿದ್ದು, ಚೈತ್ರ ತೋಟದ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಉತ್ತರ ಕರ್ನಾಟಕದ ನೇಟಿವಿಟಿ, ನಾಯಕ, ನಾಯಕಿ, ನಿರ್ಮಾಪಕ, ನಿರ್ದೇಶಕ ಹೀಗೆ ಎಲ್ಲರೂ ಸೇರಿ ಮಾಡಿರುವ ಅದೇ ಸೊಗಡಿನ ಚಿತ್ರವಿದು. ನಿನ್ನೆ ಸೋಮವಾರ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೆಯಿತು. ವೀರಸಮರ್ಥ ಅವರ ಸಂಗೀತ ಸಂಯೋಜನೆ, ಸನಾತನ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ.
ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ, ‘ಇದು ನನ್ನ ನಿರ್ದೇಶನದ ಐದನೇ ಚಿತ್ರ. 4 ವರ್ಷಗಳ ಹಿಂದೆಯೇ ಈ ಚಿತ್ರ ಪ್ರಾರಂಭವಾಗಿತ್ತು. ಹುಲಿಬೀರ ನಾಯಕನ ಹೆಸರು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲದಕ್ಕೂ ಧೈರ್ಯದಿಂದ ಮುನ್ನುಗ್ಗುವ ಹುಡುಗರನ್ನು ಅವ ನೋಡು ಹುಲಿಥರ ಇದಾನೆ ಅನ್ನುತ್ತಾರೆ, ನಾಯಕ ಬೀರ ಹಳ್ಳಿಯ ಯಾವುದೇ ಸಮಸ್ಯೆ ಇರಲಿ ಮುಂದೆನಿಂತು ಕೆಲಸ ಮಾಡುತ್ತಾನೆ. ಆತನನ್ನು ಹಳ್ಳಿಯ ಜನರೆಲ್ಲ ಹುಲಿಬೀರ ಅಂತಿರ್ತಾರೆ. ಹಾಗೇ ವಿದ್ಯಾವಂತ ಯುವಕ, ಯುವತಿಯರೆಲ್ಲ ಕೆಲಸ ಅಂತ ಸಿಟಿಗೆ ಹೋದರೆ ಆ ಹಳ್ಳಿಗಳನ್ನು ಬೆಳೆಸೋರು ಯಾರು, ಈ ಸಮಸ್ಯೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ. ಅವರೆಲ್ಲ ಮತ್ತೆ ಹೇಗೆ ಹಳ್ಳಿಗೆ ಮರಳುವಂತೆ ಮಾಡಿ, ಹಳ್ಳಿಯನ್ನು ಉದ್ದರಿಸುತ್ತಾನೆ, ಹುಲಿಬೀರ ಎನಿಸಿಕೊಳ್ಳುತ್ತಾನೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್’ ಎಂದರು.
ನಾಯಕ ಅಂಜನ್ ಮಾತನಾಡಿ, ‘ನಾನು ಉತ್ತರ ಕರ್ನಾಟಕದ ಕುಂದಗೋಳ ಎಂಬ ಪುಟ್ಟ ಗ್ರಾಮದವನು. ರೀಲ್ಸ್ , ಶಾರ್ಟ್ ಫಿಲಂ ಮಾಡುತ್ತ, ಸೋಷಿಯಲ್ ಮೀಡಿಯಾ ಮೂಲಕ ಜನರಿಂದ ಗುರ್ತಿಸಿಕೊಂಡೆ. ಯರ್ರಾಬಿರ್ರಿ ಚಿತ್ರದ ಮೂಲಕ ನಾಯಕನಾದೆ. ಹಳ್ಳಿಯ ಯುವಕರೆಲ್ಲ ಓದಿಕೊಂಡು ಕೆಲಸಕ್ಕಾಗಿ ಸಿಟಿಗೆ ಹೋಗ್ತಾರೆ. ಬರೀ ವೃದ್ದರು, ಬಡವರು ಮಾತ್ರ ಉಳಿದುಕೊಳ್ತಾರೆ. ಹೀಗಾದರೆ ನಮ್ಮ ಹಳ್ಳಿಗಳನ್ನು ಉದ್ಧಾರ ಮಾಡೋ ಯಾರು, ನಾವು ಮೊದಲು ನಮ್ಮ ಊರು, ಹಳ್ಳಿಗಳನ್ನು ಕಾಪಾಡಬೇಕು ಎಂಬ ಸಂದೇಶ ಇಟ್ಟುಕೊಂಡು ಮಾಡಿದ ಚಿತ್ರವಿದು’ ಎಂದರು.
ನಾಯಕಿ ಚೈತ್ರ ತೋಟದ ಮಾತನಾಡಿ, ‘ಈ ಹಿಂದೆ ಬ್ರಹ್ಮರಾಕ್ಷಸ, ವಿದುರ, ಚೌಕಿದಾರ್ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ನಾಯಕನ ಅಕ್ಕನ ಮಗಳ ಪಾತ್ರ ಮಾಡಿದ್ದೇನೆ. ಡೈರೆಕ್ಟರ್ ಬರೆದಿರುವ ಒಂದು ಹಾಡು ನನಗೆ ತುಂಬಾ ಇಷ್ಟವಾಯ್ತು’ ಎಂದು ಹೇಳಿದರು. ವನು ಪಾಟೀಲ್ ಹಾಗೂ ಅಂಜಲಿ ಚಿತ್ರದ ಮತ್ತಿಬ್ಬರು ನಾಯಕಿಯರು. ವೀರ್ ಸಮರ್ಥ್ ಗೀತ ಸಂಗೀತ ಚಿತ್ರಕ್ಕಿದೆ. ‘ಸರಿಗಮಪ’ ಖ್ಯಾತಿಯ ಶಿವಾನಿ ಹಾಡೊಂದಕ್ಕೆ ದನಿಯಾಗಿದ್ದಾರೆ. ಧರ್ಮ ವಿಶ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.