ಹುಬ್ಬಳ್ಳಿ: ಗ್ಯಾಸ್ ಬ್ಲಾಸ್ಟ್ ಹೈಸ್ಕೂಲ್ ಟೀಚರ್ ಗಂಗಮ್ಮ ಬಳ್ಳಾರಿ ಸಾವು, ಪತಿ-ಮಕ್ಕಳಿಗೆ ಮುಂದುವರೆದ ಚಿಕಿತ್ಸೆ…

ಶಕ್ತಿ ನಗರದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ.. ಚಿಕಿತ್ಸೆ ಫಲಿಸದೆ ಗಂಗಮ್ಮ ಬಳ್ಳಾರಿ ಸಾವು
ಹುಬ್ಬಳ್ಳಿ: ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಕ್ತಿನಗರದಲ್ಲಿರುವ ಮನೆಯೊಂದರಲ್ಲಿ ಬುಧವಾರ ರಾತ್ರಿ ನಡೆದ ಸಿಲಿಂಡರ್ ಸ್ಫೋಟದಿಂದಾಗಿ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರಿಂದ ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಗಶೆಟ್ಟಿಕೊಪ್ಪ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಗಂಗಮ್ಮ ಬಳ್ಳಾರಿ (ವಯಸ್ಸು 38) ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಘಟನೆಯಲ್ಲಿ ಗಂಗಮ್ಮ ಪತಿ ಮಹಾಂತೇಶ ಬಳ್ಳಾರಿ, ಮಕ್ಕಳಾದ ಮನೋರಂಜನ್ ಮತ್ತು ಕಾರುಣ್ಯಗೂ ತೀವ್ರ ಸುಟ್ಟ ಗಾಯಗಳಾಗಿವೆ. ಮೂವರಿಗೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಪ್ರಕರಣ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆದಿದೆ.