‘ಕಮರೊ2’ ಆಗಸ್ಟ್ 1ರಂದು ತೆರೆಗೆ… ಪ್ಯಾರಾ ನಾರ್ಮಲ್ ಜಾನರ್ ಸಿನಿಮಾ…

ಈ ಹಿಂದೆ ‘ಕಮರೊಟು ಚೆಕ್ ಪೋಸ್ಟ್’ ಸಿನಿಮಾ ನಿರ್ದೇಶಿಸಿದ್ದ ಎ ಪರಮೇಶ್ ಇದೀಗ ‘ಕಮರೊ2’ ಸಿನಿಮಾ ಮಾಡಿದ್ದಾರೆ. ಅನಂತಸ್ವಾಮಿ ಮತ್ತು ರಜನಿ ಭಾರದ್ವಾಜ್ ಚಿತ್ರದ ಪ್ರಮುಖ ಕಲಾವಿದರು
ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಪ್ಯಾರಾ ನಾರ್ಮಲ್ ಜಾನರ್‌ನ ‘ಕಮರೊ2’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ಹಾರಾರ್ ಕಥಾಹಂದರವನ್ನೂ ಹೊಂದಿರುವ ಈ ಚಿತ್ರ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ. ಪವನ್ ಗೌಡ ನಿರ್ಮಾಣದ ಚಿತ್ರವನ್ನು ಎ. ಪರಮೇಶ್ ನಿರ್ದೇಶಿಸಿದ್ದಾರೆ. ‘ನಾನು ಈ ಹಿಂದೆ ಕನ್ನಡದಲ್ಲಿ ಮೊದಲ ಬಾರಿ ಅಪರೂಪ ಎನ್ನಬಹುದಾದ ಪ್ಯಾರಾ ನರ್ಮಲ್ ಜಾನರ್‌ನ ‘ಕಮರೊಟು ಚೆಕ್ ಪೋಸ್ಟ್’ ಚಿತ್ರವನ್ನು ನಿರ್ದೇಶನ ಮಾಡಿದ್ದೆ. ಅದು ನನ್ನ ತಂತ್ರಜ್ಞಾನದ ಅನುಭವಕ್ಕಾಗಿ ಮಾಡಿದ ಚಿತ್ರ. ಅದರಲ್ಲಿ ಯಾವುದೇ ಪರಿಚಿತ ಕಲಾವಿದರು ಅಭಿನಯಿಸಿರಲಿಲ್ಲ. ಆದರೂ ಆ ಚಿತ್ರ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಈಗ ಸೀಕ್ವೆಲ್ ಆಗಿ ‘ಕಮರೊ2′ ಚಿತ್ರ ನಿರ್ದೇಶನ ಮಾಡಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಪರಮೇಶ್.
ಚಿತ್ರಕ್ಕೆ ಮಂಗಳೂರಿನ ಉಡುಪಿ, ಚಿಕ್ಕಮoಗಳೂರು ಸುತ್ತಮುತ್ತಲಿನಲ್ಲಿ ಚಿತ್ರೀಕರಣ ನಡೆದಿದೆ. ಕಿರುತೆರೆ ನಟ ಅನಂತಸ್ವಾಮಿ ಚಿತ್ರದ ಹೀರೋ ಆಗಿ ನಟಿಸಿದ್ದು, ರಜನಿ ಭಾರದ್ವಾಜ್ ನಾಯಕನಟಿ. ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರ ಪೋಷಿಸಿದ್ದಾರೆ. ನೀನಾಸಂ ಅಶ್ವಥ್, ನಾಗೇಂದ್ರ ಅರಸ್, ಮಹೇಶ್ ರಾಜ್, ಬೇಬಿ ಖುಷಿ… ಚಿತ್ರದ ಇತರೆ ಕಲಾವಿದರು. ವಿಶೇಷಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಸಹ ಇದ್ದಾರೆ. ಎ ಟಿ ರವೀಶ್ ಸಂಗೀತ ನಿರ್ದೇಶನ, ಪ್ರಜ್ವಲ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ.
‘ನಿರ್ದೇಶಕ ಪರಮೇಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ನನ್ನ ಪಾತ್ರ ಕೂಡ ಚೆನ್ನಾಗಿದೆ. ಗುಟಮಟ್ಟದಲ್ಲಂತೂ ಯಾವುದೇ ಭಾಷೆಗಳ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ಬಹಳ ಉತ್ತಮಾವಾಗಿ ಚಿತ್ರಿಸಿದ್ದಾರೆ. ಇಂತಹ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರಬೇಕು. ನನ್ನ ಪಾತ್ರ ಕೂಡ ಇಲ್ಲಿ ವಿಭಿನ್ನವಾಗಿದೆ’ ಎನ್ನುವುದು ನಟಿ ಪ್ರಿಯಾಂಕ ಉಪೇಂದ್ರ ಅವರ ಮಾತು. ‘ತಂತ್ರಜ್ಞರು ಹಾಗೂ ಕಲಾವಿದರು ನೀಡಿದ ಪ್ರೋತ್ಸಾಹವೇ ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣ. ಅವರಿಗೆ ನನ್ನ ಧನ್ಯವಾದ. ಇದು ನನ್ನ ನಿರ್ಮಾಣದ ಮೊದಲ ಚಿತ್ರ. ನಾನು ರವಿಚಂದ್ರನ್ ಅವರ ಅಭಿಮಾನಿ. ಹಾಗಾಗಿ ನಮ್ಮ ಸಂಸ್ಥೆಗೆ ಕನಸು ಪಿಕ್ಚರ್ಸ್ ಎಂದು ಹೆಸರಟ್ಟಿದ್ದೇನೆ. ಆಗಸ್ಟ್ 1 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರ ಬೆಂಬವಿರಲಿ’ ಎಂದು ನಿರ್ಮಾಪಕ ಪವನ್ ಗೌಡ ಮನವಿ ಮಾಡುತ್ತಾರೆ.