‘ಪೆದ್ದಿ’ಗಾಗಿ ರಾಮ್ ಚರಣ್ ಬೀಸ್ಟ್ ಮೂಡ್… ಇಂದಿನಿಂದ ಮತ್ತೆ ಶೂಟಿಂಗ್ ಶುರು…!

ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ ಶಿವರಾಜಕುಮಾರ್
ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ತಮ್ಮ ಪಾತ್ರಕ್ಕಾಗಿ ರಾಮ್ ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ. ಜಿಮ್ ನಲ್ಲಿ ದೇಹ ಹುರಿಗೊಳಿಸಿ ರಗಡ್ ಅವತಾರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಮೆಗಾ ಪವರ್ ಸ್ಟಾರ್, ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ಸದ್ಯ ರಾಮ್ ಚರಣ್ ತಮ್ಮ ಪಾತ್ರಕ್ಕಾಗಿ ಕಂಪ್ಲೀಟ್ ತಯಾರಾಗಿದ್ದು, ಇಂದಿನಿಂದ ಮತ್ತೆ ‘ಪೆದ್ದಿ’ ಸಿನಿಮಾದ ಶೂಟಿಂಗ್ ಶುರುವಾಗಲಿದೆ.
‘ಉಪ್ಪೇನ’ ಸಿನಿಮಾ ಖ್ಯಾತಿಯ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನ ‘ಪೆದ್ದಿ’ ಸ್ಫೋರ್ಟ್ ಆಕ್ಷನ್ ಡ್ರಾಮಾ ಕಥಾಹಂದರ ಹೊಂದಿದೆ. ರಾಮ್ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು ಮತ್ತು ದಿವೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2026ರ ಮಾರ್ಚ್ 27ಕ್ಕೆ ‘ಪೆದ್ದಿ’ ಸಿನಿಮಾ ಬಿಡುಗಡೆಯಾಗಲಿದೆ. ಅಂದು ರಾಮ್ ಚರಣ್ ಹುಟ್ಟುಹಬ್ಬ. ಆ ಕಾರಣದಿಂದ ಅಭಿಮಾನಿಗಳ ಪಾಲಿಗೆ ಸಿನಿಮಾದ ಬಿಡುಗಡೆ ಸಖತ್ ಸ್ಪೆಷಲ್ ಆಗಿರಲಿದೆ. ಇದೇ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ಕುಮಾರ್ ಕೂಡ ಅಭಿನಯಿಸುತ್ತಿದ್ದಾರೆ. ಹಾಗಾಗಿ ಕರ್ನಾಟಕದಲ್ಲೂ ಈ ಸಿನಿಮಾ ಮೇಲೆ ನಿರೀಕ್ಷೆ ಜೋರಾಗಿದೆ.
ಈ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡುತ್ತಿದ್ದು, ವೆಂಕಟ ಸತೀಶ್ ಕಿಲಾರು ಹಣ ಹಾಕುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ನಿರ್ಮಾಣದಲ್ಲಿ ಸಾಥ್ ನೀಡಿದೆ. ಆರ್. ರತ್ನವೇಲು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮಾರ್ಚ್ 27, 2026 ರಂದು ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.